ಸಿಡ್ನಿ: ಕ್ರಿಕೆಟ್ ಅಭ್ಯಾಸದ ವೇಳೆ ಚೆಂಡು ತಲೆಗೆ ತಗುಲಿ ಯುವ ಕ್ರಿಕೆಟಿಗನೊಬ್ಬ ಮೃತಪಟ್ಟ ದಾರುಣ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸ್ಥಳೀಯ ಫೆರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್‌ನಲ್ಲಿ ತಾಲೀಮು ನಡೆಸುತ್ತಿದ್ದ 17 ವರ್ಷದ ಬೆನ್ ಆಸ್ಟಿನ್ ಮೃತಪಟ್ಟ ಬಾಲಕ.
2014ರಲ್ಲಿ ಆಸ್ಟ್ರೇಲಿಯಾದ ಫಿಲಿಪ್ ಹ್ಯೂಸ್ ಅವರು ಸೀನ್ ಅಬಾಟ್ ಅವರ ಬೌನ್ಸರ್ ಅನ್ನು ಎದುರಿಸುವ ಸಂದರ್ಭದಲ್ಲಿ ಚೆಂಡು ಕುತ್ತಿಗೆಗೆ ಬಡಿದು ಮೃತಪಟ್ಟಿದ್ದರು. ಇದೇ ರೀತಿಯ ಮತ್ತೊಂದು ದುರಂತ ಘಟನೆ ಸಂಭವಿಸಿದ್ದು ಕ್ರಿಕೆಟ್ ಜಗತ್ತನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಕ್ರಿಕೆಟಿಗ ಬೆನ್ ಆಸ್ಟಿನ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಕುತ್ತಿಗೆಗೆ ಚೆಂಡು ಬಲವಾಗಿ ತಗುಲಿತು. ಗಾಯ ತೀವ್ರವಾಗಿದ್ದರಿಂದ, ಅವರನ್ನು ತಕ್ಷಣವೇ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನಪ್ಪಿದ್ದಾರೆ.
ಅಭ್ಯಾಸದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿದ್ದರು. ಆದರೆ ಕುತ್ತಿಗೆ ರಕ್ಷಣೆಯನ್ನು ಹೊಂದಿರಲಿಲ್ಲ ಎಂದು ಬೆನ್ ತಂದೆ ತಿಳಿಸಿದ್ದಾರೆ.