ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್ ಅಂತರದ ಸೋಲು ಕಂಡಿದ್ದು, ವಿಶ್ವಕಪ್ ಫೈನಲ್ ಕನಸು ಭಗ್ನವಾಗಿದೆ. ಆಸಿಸ್ ನಾಯಕಿ ಅಲಿಸಾ ಹೀಲಿ ಇದೀಗ ಸದ್ದಿಲ್ಲದೆ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಸೆಮಿಫೈನಲ್‌ನಲ್ಲಿ ಭಾರತ ದಾಖಲೆಯ ಚೇಸಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ, ಹೀಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇದು ತನ್ನ ಕೊನೆಯ ಪ್ರದರ್ಶನವಾಗಿರಬಹುದು ಎಂದು ಸುಳಿವು ನೀಡಿದರು. 2029ರ ಆವೃತ್ತಿಯ ಬಗ್ಗೆ ಕೇಳಿದಾಗ 'ನಾನು ಅಲ್ಲಿರುವುದಿಲ್ಲ' ಎಂದಿದ್ದಾರೆ. ಅವರು ಇನ್ನೂ ನಿವೃತ್ತಿ ಘೋಷಿಸದಿದ್ದರೂ, ಹೀಲಿ ಇದು ಅವರ ಕೊನೆಯ ಏಕದಿನ ವಿಶ್ವಕಪ್ ಎಂದು ದೃಢಪಡಿಸಿದರು.
ಅಲಿಸಾ ಹೀಲಿ ಊಹಿಸಿದ್ದ ಅಂತ್ಯ ಇದಾಗಿರಲಿಲ್ಲ. ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅವರ ತಂಡವು ಭಾರತಕ್ಕೆ 339 ರನ್‌ಗಳ ಗುರಿ ನೀಡಿತು. ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಆಸರೆಯಾದವರು ಜೆಮಿಮಾ ರೊಡ್ರಿಗಸ್. ಗಾಯಗೊಂಡಿದ್ದ ಪ್ರತೀಕಾ ರಾವಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ವಿಕೆಟ್ ಒಪ್ಪಿಸಿದ ಬಳಿಕ ರೊಡ್ರಿಗಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಜೆಮಿಮಾ 82 ರನ್‌ಗಳಿಸಿದ್ದಾಗ ಹೀಲಿ ಅವರೇ ಸ್ವತಃ ಒಂದು ಕ್ಯಾಚ್ ಕೈಬಿಟ್ಟರು. ಇದು ಆಸ್ಟ್ರೇಲಿಯಾ ಪರ ದುಬಾರಿಯಾಗಿ ಪರಿಣಮಿಸಿತು.
'ಉಭಯ ತಂಡಗಳ ನಡುವೆ ಉತ್ತಮ ಸ್ಪರ್ಧೆ ಇದಾಗಿತ್ತು. ಆ ಬಗ್ಗೆ ಯೋಚಿಸಿದರೆ, ನಮ್ಮನ್ನು ನಾವೇ ಸ್ವಲ್ಪ ಮಟ್ಟಿಗೆ ನೋಯಿಸಿಕೊಂಡೆವು. ನಾವು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಅಷ್ಟು ಉತ್ತಮವಾಗಿ ಬೌಲಿಂಗ್ ಕೂಡ ಮಾಡಲಿಲ್ಲ ಮತ್ತು ಮೈದಾನದಲ್ಲಿ ಸಾಕಷ್ಟು ಅವಕಾಶಗಳನ್ನು ಕೈಚೆಲ್ಲಿದೆವು. ಆದರೆ, ಅಂತಿಮವಾಗಿ ನಾವು ಸೋತೆವು' ಎಂದು ಸೆಮಿಫೈನಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೀಲಿ ಒಪ್ಪಿಕೊಂಡರು.
ಮುಂದಿನ ODI ವಿಶ್ವಕಪ್ ಬರುವ ಹೊತ್ತಿಗೆ 39 ವರ್ಷ ವಯಸ್ಸಾಗಿರುವ ಹೀಲಿ, ತನ್ನ ದೇಹ ಮತ್ತು ಕ್ರೀಡೆಯ ನಿರಂತರ ಬೇಡಿಕೆಗಳು ಆ ಪ್ರಯಾಣವನ್ನು ಸುಲಭಗೊಳಿಸುವುದಿಲ್ಲ. ಅದುವೇ ಮುಂದಿನ ಚಕ್ರದ ಸೌಂದರ್ಯ. ಅದು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ನಾವು ನೋಡಲಿದ್ದೇವೆ. ಮುಂದಿನ ವರ್ಷ T20 ವಿಶ್ವಕಪ್ ಇದೆ. ಇದು ನಮ್ಮ ತಂಡಕ್ಕೆ ನಿಜವಾಗಿಯೂ ರೋಮಾಂಚನಕಾರಿಯಾಗಿದೆ. ಆದರೆ, ನಮ್ಮ ಏಕದಿನ ಕ್ರಿಕೆಟ್ ಬಹುಶಃ ಮತ್ತೆ ಸ್ವಲ್ಪ ಬದಲಾಗಲಿದೆ ಎಂದು ನಾನು ಭಾವಿಸುತ್ತೇನೆ' ಎಂದರು.
ಹೀಲಿ ಮಹಿಳಾ ಏಕದಿನ ವಿಶ್ವಕಪ್‌ಗಳಲ್ಲಿ 56.62 ಸರಾಸರಿಯಲ್ಲಿ 906 ರನ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನಡೆದ 2022ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಆವೃತ್ತಿಯಲ್ಲಿ, ಅವರು 299 ರನ್‌ಗಳನ್ನು ಗಳಿಸಿದರು. ಇದರಲ್ಲಿ ಗುಂಪು ಹಂತದಲ್ಲಿ ಭಾರತದ ವಿರುದ್ಧದ 142 ರನ್‌ಗಳು ಅತ್ಯದ್ಭುತವಾಗಿತ್ತು. ಅವರ ಪತಿ ಮಿಚೆಲ್ ಸ್ಟಾರ್ಕ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಇದ್ದರು.