ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ನ್ಯೂಜಿಲೆಂಡ್ ತಂಡದ ಲೆಜೆಂಡ್ ಆಟಗಾರ ರಾಸ್ ಟೇಲರ್ (Ross Taylor) ನಿವೃತ್ತಿ ವಾಪಸ್ ಪಡೆದಿದ್ದು, ಮತ್ತೆ ಕ್ರಿಕೆಟ್ ಗೆ ಮರಳುವುದಾಗಿ ಘೋಷಿಸಿದ್ದಾರೆ.
ಹೌದು.. 2022ರಲ್ಲಿ ಎಲ್ಲ ರೀತಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ನ್ಯೂಜಿಲೆಂಡ್ ದಂತಕಥೆ ರಾಸ್ ಟೇಲರ್, ತಮ್ಮ ನಿರ್ಧಾರವನ್ನು ಬದಲಾಯಿಸಿ 41 ನೇ ವಯಸ್ಸಿನಲ್ಲಿ ನಿವೃತ್ತಿಯಿಂದ ಹೊರಬಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ರಾಸ್ ಟೇಲರ್, ತಾವು ಈ ಹಿಂದೆ ಘೋಷಣೆ ಮಾಡಿದ್ದ ಕ್ರಿಕೆಟ್ ನಿವೃತ್ತಿಯನ್ನು ಹಿಂದಕ್ಕೆ ಪಡೆದು ಮತ್ತೆ ಮೈದಾನಕ್ಕೆ ಇಳಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಆದರೆ ನಿವೃತ್ತಿ ವಾಪಸಾತಿಯಲ್ಲೂ ಟ್ವಿಸ್ಟ್ ನೀಡಿರುವ ರಾಸ್ ಟೇಲರ್, ತಾವು ನಿವೃತ್ತಿ ವಾಪಸ್ ಪಡೆದು ನ್ಯೂಜಿಲೆಂಡ್ ಪರ ಆಡುವುದಿಲ್ಲ.. ಬದಲಿಗೆ ಹೊಸದೊಂದು ದೇಶದ ಪರವಾಗಿ ಆಡುತ್ತೇನೆ ಎಂದು ಘೋಷಿಸಿದ್ದಾರೆ.
ಇಷ್ಟಕ್ಕೂ ರಾಸ್ ಟೇಲರ್ ಹೇಳಿದ್ದೇನು?
"ಇದು ಅಧಿಕೃತ.. ನಾನು ಕ್ರಿಕೆಟ್‌ನಲ್ಲಿ ಸಮೋವಾ ತಂಡವನ್ನು ಪ್ರತಿನಿಧಿಸುತ್ತೇನೆ ಎಂದು ಘೋಷಿಸಲು ನನಗೆ ಹೆಮ್ಮೆಯಿದೆ. ಇದು ನಾನು ಇಷ್ಟಪಡುವ ಆಟಕ್ಕೆ ಮರಳುವುದಕ್ಕಿಂತ ಹೆಚ್ಚಿನದಾಗಿದೆ - ನನ್ನ ಪರಂಪರೆ, ಸಂಸ್ಕೃತಿ, ಹಳ್ಳಿಗಳು ಮತ್ತು ಕುಟುಂಬವನ್ನು ಪ್ರತಿನಿಧಿಸುವುದು ದೊಡ್ಡ ಗೌರವ. ಆಟಕ್ಕೆ ಮರಳಲು, ತಂಡವನ್ನು ಸೇರಲು ಮತ್ತು ಮೈದಾನದ ಹೊರಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಅವಕಾಶಕ್ಕಾಗಿ ನಾನು ಉತ್ಸುಕನಾಗಿದ್ದೇನೆ" ಎಂದು ಟೇಲರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.
ಯಾವುದೀ 'ಸಮೋವಾ'?
ಟೇಲರ್ ನ್ಯೂಜಿಲೆಂಡ್ ಪರ ಆಡುವುದಿಲ್ಲ, ಆದರೆ ಓಷಿಯಾನಿಯಾ ಪ್ರದೇಶದ ಉದಯೋನ್ಮುಖ ಕ್ರಿಕೆಟ್ ರಾಷ್ಟ್ರವಾದ ಸಮೋವಾ ಪರ ಆಡುವುದಾಗಿ ಘೋಷಿಸಿದ್ದಾರೆ. ಸಮೋವಾ ಪ್ರಸ್ತುತ 2026 ರ ಪುರುಷರ ಟಿ 20 ವಿಶ್ವಕಪ್ ಏಷ್ಯಾ-ಇಎಪಿ ಪ್ರಾದೇಶಿಕ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಅಲ್ಲಿ ಅವರು ಅಕ್ಟೋಬರ್ 8 ರಿಂದ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇಲ್ಲಿ ದೊರೆಯುವ ಫಲಿತಾಂಶಗಳು ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುವ ಪ್ರತಿಷ್ಠಿತ ಟಿ 20 ಪಂದ್ಯಾವಳಿಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ.
ಇಷ್ಟಕ್ಕೂ ಟೇಲರ್ ಸಮೋವಾ ಪರ ಆಡಲು ಅರ್ಹತೆ ಪಡೆದದ್ದು ಹೇಗೆ?
ರಾಸ್ ಟೇಲರ್ 2006 ರಿಂದ 2022 ರವರೆಗೆ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್ ನ ಎಲ್ಲಾ ಸ್ವರೂಪಗಳಲ್ಲಿ ಅವರ ಗರಿಷ್ಠ ರನ್ ಗಳಿಸಿದ ಆಟಗಾರರಾಗಿ ವೃತ್ತಿಜೀವನವನ್ನು ಕೊನೆಗೊಳಿಸಿದರು. ಇದಲ್ಲದೆ, ಟೇಲರ್ ಸಮೋವನ್ ಪಾಸ್‌ಪೋರ್ಟ್ ಅನ್ನು ಸಹ ಹೊಂದಿದ್ದಾರೆ. ರಾಸ್ ಟೇಲರ್ ಅವರ ತಾಯಿ ಸಮೋವಾ ಪ್ರಜೆಯಾಗಿದ್ದು, ಇದೇ ಕಾರಣದಿಂದ ಅರ್ಹತಾ ಪಂದ್ಯಗಳಲ್ಲಿ ಸಮೋವಾವನ್ನು ಪ್ರತಿನಿಧಿಸಲು ಟೇಲರ್ ಅರ್ಹರಾಗಿದ್ದಾರೆ.
ನಿಯಮವೇನು?
ಇನ್ನು ರಾಸ್ ಟೇಲರ್ ತಂಡ ಬದಲಾಯಿಸುವ ಮೊದಲು ಕೆಲ ನಿಯಮಗಳನ್ನು ಪಾಲಿಸಬೇಕಿತ್ತು. ಅದರಂತೆ ಟೇಲರ್ ತಮ್ಮ ನಿವೃತ್ತಿ ಬಳಿಕ ಕಡ್ಡಾಯ ಮೂರು ವರ್ಷಗಳ ಕೂಲಿಂಗ್ ಆಫ್ ಅವಧಿಯನ್ನು ಪೂರ್ಣಗೊಳಿಸಬೇಕಿತ್ತು. ಈ ಅವಧಿ ಪೂರ್ಣಗೊಂಡಿದ್ದು, ಅವರು ಏಪ್ರಿಲ್ 2022 ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಪರ ಆಡಿದ್ದರು. 41 ವರ್ಷದ ಟೇಲರ್ ಮುಂದಿನ ಬಾರಿ ಅಕ್ಟೋಬರ್ 8 ರಂದು ಸಮೋವಾ vs ಒಮನ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.