ನವದೆಹಲಿ: ಮುಂಬರುವ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ತುರ್ತು ವಿಚಾರಣೆಗೆ ಪಟ್ಟಿ ಮಾಡುವ ವಿಷಯ ಪ್ರಸ್ತಾಪಿಸಿದರು. "ಅಂತಹ ತುರ್ತು ಏನಿದೆ? ಇದು ಪಂದ್ಯ, ಇರಲಿ. ಈ ಭಾನುವಾರ ಪಂದ್ಯ, ಏನು ಮಾಡಬಹುದು?" ಎಂದು ಪೀಠ ಪ್ರಶ್ನಿಸಿತು.
ಭಾನುವಾರ ಕ್ರಿಕೆಟ್ ಪಂದ್ಯವನ್ನು ನಿಗದಿಪಡಿಸಲಾಗಿದೆ ಮತ್ತು ಶುಕ್ರವಾರ ವಿಷಯ ಪಟ್ಟಿ ಮಾಡದಿದ್ದರೆ ಅರ್ಜಿಯು ನಿಷ್ಪ್ರಯೋಜಕವಾಗುತ್ತದೆ ಎಂದು ವಕೀಲರು ವಾದಿಸಿದಾಗ, ಪೀಠವು, "ಈ ಭಾನುವಾರ ಪಂದ್ಯವೇ? ಅದರ ಬಗ್ಗೆ ನಾವು ಏನು ಮಾಡಬಹುದು? ಇರಲಿ ಬಿಡಿ." ಪಂದ್ಯ ಮುಂದುವರಿಯಬೇಕು" ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ಅಸಮಂಜಸ ಸಂದೇಶ ರವಾನಿಸುತ್ತದೆ ಎಂದು ಉರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು, ಸೆಪ್ಟೆಂಬರ್ 14 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 2025ರ ಏಷ್ಯಾ ಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ.