ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಒತ್ತಡದ ನಡುವೆ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾದಾಟ ಹಲವು ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಹೆಜ್ಜೆ ಹೆಜ್ಜೆಗೂ ಪಾಕಿಸ್ತಾನಕ್ಕೆ ನಿರಾಸೆಯೇ ಆಯಿತು.
ಆರಂಭದಲ್ಲಿ ಟಾಸ್ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಅವರೊಂದಿಗೆ ಭಾರತದ ನಾಯಕ ಸೂರ್ಯ ಕುಮಾರ್ ಯಾದವ್ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿದರೆ, ಪಂದ್ಯ ಮುಗಿದ ಬಳಿಕವೂ ಉಳಿದ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡಲಿಲ್ಲ.
ಕ್ರಿಕೆಟ್ ಸಂಪ್ರದಾಯದ ಪ್ರಕಾರ, ಪಂದ್ಯ ಮುಗಿದ ಬಳಿಕ ಪರಸ್ಪರ ಎದುರಾಳಿಗಳು ಹ್ಯಾಂಡ್ ಶೇಕ್ ಮಾಡುವುದು ಸಹಜ. ಆದರೆ, ಈ ಸಂಪ್ರದಾಯ ಮುರಿದ ಭಾರತೀಯ ಆಟಗಾರರು ಗೆಲುವಿನ ಬಳಿಕ ಶತ್ರು ರಾಷ್ಟ್ರದ ಆಟಗಾರರಿಗೆ ಹ್ಯಾಂಡ್ ಶೇಕ್ ಮಾಡದೆ ಮೈದಾನದಿಂದ ನಿರ್ಗಮಿಸಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆಯೇ ಪಾಕಿಸ್ತಾನದ ಆಟಗಾರರು ಭಾರತೀಯ ಆಟಗಾರರಿಗೆ ಹಸ್ತಲಾಘವ ಮಾಡಲು ಮೈದಾನದಲ್ಲಿ ಸಜ್ಜಾಗಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಭಾರತೀಯ ಆಟಗಾರರು ನೇರವಾಗಿ ಡ್ರೆಸ್ಸಿಂಗ್ ರೂಮ್ ನತ್ತ ತೆರಳಿದ್ದು, ಪರಸ್ಪರ ಹಸ್ತಲಾಘವ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಮತ್ತೊಂದೆಡೆ ಭಾರತೀಯ ಆಟಗಾರರ ಈ ನಡೆಗೆ ಭಾರತೀಯ ಮುಖ್ಯ ಕೋಚ್ ಗೌತಮ್ ಗಂಭೀರ್ ಸಲಹೆಯೇ ಕಾರಣ ಎನ್ನಲಾಗುತ್ತಿದೆ. ಭಾರತಕ್ಕಾಗಿ ಆಡುವುದು ಮಾತ್ರ ನಿಮ್ಮ ಕೆಲಸ. ಪಹಲ್ಗಾಮ್‌ನಲ್ಲಿ ಏನಾಯಿತು ಎಂಬುದನ್ನು ಮರೆಯಬೇಡಿ. ಕೈಕುಲುಕಬೇಡಿ, ಕೇವಲ ಹೊರಗೆ ಹೋಗಿ, ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತು ಭಾರತಕ್ಕಾಗಿ ಗೆಲ್ಲಿರಿ," ಎಂದು ಗಂಭೀರ್ ಹೇಳಿರುವುದಾಗಿ ವರದಿ ಹೇಳಿದೆ.
ಗೌತಮ್ ಗಂಭೀರ್ ಹೇಳಿದ್ದು ಏನು?
ಏಷ್ಯಾ ಕಪ್ 2025 ರ ಪ್ರಸಾರಕರೊಂದಿಗೆ ಮಾತನಾಡಿದ ಗೌತಮ್ ಗಂಭೀರ್, ಈ ಟೂರ್ನಿ ಕ್ರಿಕೆಟ್ ಅಷ್ಟೇ ಅಲ್ಲದೇ ಸಾಕಷ್ಟು ವಿಚಾರಗಳಿಂದ ಮಹತ್ವದ್ದಾಗಿತ್ತು. ಪಹಲ್ಗಾಮ್ ದಾಳಿಯಲ್ಲಿ ಬಲಿಯಾದವರು ಹಾಗೂ ಅವರ ಕುಟುಂಬದವರೊಂದಿಗೆ ಒಗ್ಗಟ್ಟು ಪ್ರದರ್ಶಿಸಬೇಕಾಗಿತ್ತು. ಇದಕ್ಕಿಂತಲೂ ಹೆಚ್ಚಾಗಿ ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ಧನ್ಯವಾದ ಸಲ್ಲಿಸಬೇಕಾಗಿತ್ತು. ನಮ್ಮ ದೇಶದ ಹೆಮ್ಮೆ ಕಾಪಾಡಲು ಹಾಗೂ ಸಂತೋಷಪಡಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.