ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಅವಿಸ್ಮರಣೀಯ ಪ್ರದರ್ಶನ ನೀಡಿದ್ದು ಮಾತ್ರವಲ್ಲದೇ 28 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದು ಹಾಕಿದೆ.
ಹೌದು.. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ವನಿತೆಯರ ತಂಡದ ವಿರುದ್ಧ 43 ರನ್ ಗಳ ಅಂತರದ ಜಯ ದಾಖಲಿಸಿತು.
ಇದು ಸರಣಿಯಲ್ಲಿ ಆಸ್ಟ್ರೇಲಿಯಾ ವನಿತೆಯರಿಗೆ 2ನೇ ಜಯವಾಗಿದ್ದು, ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತು.
ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತಾ ಪಡೆ ಮೊದಲು ಬ್ಯಾಟಿಂಗ್ ಮಾಡಿ ರನ್‌ಗಳ ಶಿಖರವನ್ನೇ ಗುರಿಯಾಗಿ ನೀಡಿತು. ಆಸ್ಟ್ರೇಲಿಯಾ ತಂಡ ಬರೋಬ್ಬರಿ 412 ರನ್ ಬಾರಿಸಿತು.
ಆಸ್ಟ್ರೇಲಿಯಾ ಸಿಡಿಲಬ್ಬರದ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಬೆತ್ ಮೂನಿ ಅವರ 138 ಮತ್ತು ಜಾರ್ಜಿಯಾ ವಾಲ್ ಅವರ 81 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 412 ರನ್ ಗಳಿಸಿತು.
ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಅಲಿಸಾ ಹೀಲಿ 30 ರನ್ ಗಳಿಸಿದರೆ, ಜಾರ್ಜಿಯಾ ವೋಲ್ 81 ರನ್ ಚಚ್ಚಿದರು. ಎಲ್ಲಿಸ್ ಪೆರ್ರಿ 68 ರನ್ ಕಲೆಹಾಕಿದರೆ, ಬೆತ್ ಮೂನಿ 138 ರನ್ ಗಳಿಸಿದರು.
ಆಶ್ಲೆ ಗಾರ್ಡ್ನರ್ 39ರನ್ ಕಲೆಹಾಕಿದರೆ, ತೆಹ್ಲಿಯಾ ಮೆಗ್ರಾತ್ (14)ಜಾರ್ಜಿಯಾ ವೇಹ್ರಾಮ್ (16) ಮತ್ತು ಅಲನಾ ಕಿಂಗ್ (12)ಎರಡಂಕಿ ರನ್ ಗಳ ಕಾಣಿಕೆ ನೀಡಿ ತಂಡದ ಮೊತ್ತ 400 ಗಡಿದಾಟುವಂತೆ ನೋಡಿಕೊಂಡರು.
28 ವರ್ಷಗಳ ಹಳೆಯ ದಾಖಲೆ
ಈ ಬೃಹತ್ ಮೊತ್ತದತ್ತದ ಮೂಲಕ ಆಸ್ಟ್ರೇಲಿಯಾ ವನಿತೆಯರ ತಂಡ 28 ವರ್ಷಗಳ ಹಳೆಯ ದಾಖಲೆ ಪತನ ಮಾಡಿದೆ. ಮಹಿಳಾ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಹಿಂದಿನ ಅತ್ಯಧಿಕ ಸ್ಕೋರ್ 1997 ರಲ್ಲಿ ಡೆನ್ಮಾರ್ಕ್ ವಿರುದ್ಧ 412 ರನ್ ಆಗಿತ್ತು. ಇದೀಗ ಭಾರತ ಮಹಿಳಾ ತಂಡದ ವಿರುದ್ಧ 412 ರನ್ ಗಳಿಸುವ ಮೂಲಕ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಇದ್ದ ಆ ದಾಖಲೆಯನ್ನು ಸರಿಗಟ್ಟಿದೆ.