ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ಕ್ರಿಕೆಟ್ ತಂಡ 43 ರನ್ ಗಳ ಅಂತರದಲ್ಲಿ ಸೋಲು ಕಂಡಿದ್ದು ಮಾತ್ರವಲ್ಲದೇ 1-2 ಅಂತರದಲ್ಲಿ 3 ಏಕದಿನ ಪಂದ್ಯಗಳ ಸರಣಿಯನ್ನೂ ಕೈ ಚೆಲ್ಲಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 413 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ವನಿತೆಯರ ತಂಡ 47 ಓವರ್ ನಲ್ಲಿ 369 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ 43 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಭಾರತದ ಪರ ಸ್ಮೃತಿ ಮಂದಾನ (125) ಶತಕಗಳಿಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ (52 ರನ್), ದೀಪ್ತಿ ಶರ್ಮಾ (72 ರನ್) ಅರ್ಧಶತಕ ಗಳಿಸಿ ತಂಡ ತಿರುಗೇಟು ನೀಡಲು ನೆರವಾದರು.
ಆದರೆ ಕೆಳ ಕ್ರಮಾಂಕದಲ್ಲಿ ಸ್ನೇಹ್ ರಾಣಾ (35 ರನ್) ಹೊರತುಪಡಿಸಿ ಉಳಿದಾವ ಬ್ಯಾಟರ್ ಗಳಿಂದಲೂ ಉತ್ತಮ ಬ್ಯಾಟಿಂಗ್ ಮೂಡಿಬರದ ಕಾರಣ ಮತ್ತು ಅಗ್ರ ಕ್ರಮಾಂಕದಲ್ಲಿ ಪ್ರತೀಕ ರಾವಲ್, ಹರ್ಲೀನ್ ಡಿಯೋಲ್ ಬೇಗನೆ ವಿಕೆಟ್ ಕೈ ಚೆಲ್ಲಿದ್ದರಿಂದ ಭಾರತ ಸೋಲುವಂತಾಯಿತು.
ಉಳಿದಂತೆ ಆಸ್ಟ್ರೇಲಿಯಾ ಪರ ಕಿಮ್ ಗಾರ್ತ್ 3 ಮತ್ತು ಮೆಗಾನ್ ಶಟ್ 2 ವಿಕೆಟ್ ಪಡೆದು ಮಿಂಚಿದರೆ, ಆಶ್ಲೆ ಗಾರ್ಡ್ನರ್, ತಹಿಲಾ ಮೆಗ್ರಾತ್, ಗ್ರೇಸ್ ಹ್ಯಾರಿಸ್ ಮತ್ತು ಜಾರ್ಜಿಯಾ ವೇರ್ಹ್ಯಾಮ್ ತಲಾ ಒಂದು ವಿಕೆಟ್ ಪಡೆದರು.
ಆಸಿಸ್ ಪರ ಶತಕ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಬೆತ್ ಮೂನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.