ಅಬುದಾಬಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೀಲಂಕಾ ಸೋತಿದ್ದು, ಪಂದ್ದ ಹೊರತಾಗಿಯೂ ಇಂದು ಮೈದಾನದಲ್ಲಿ ಕೆಲ ಹೈಡ್ರಾಮಾ ನಡೆಯಿತು.
ಹೌದು.. ಅಬುದಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 134 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ 18 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇನ್ನು ಪಂದ್ಯದಲ್ಲಿ ಪಾಕಿಸ್ತಾನದ ಸ್ಪಿನ್ವರ್ ಅಬ್ರಾರ್ ಮತ್ತು ಶ್ರೀಲಂಕಾದ ಹಸರಂಗ ಪರಸ್ಪರ ಕಿಚಾಯಿಸಿಕೊಂಡರು. ಇಬ್ಬರೂ ಪರಸ್ಪರ ತಮ್ಮ ಸಂಭ್ರಮಾಚರಣೆಯನ್ನು ಬದಲಿಸಿಕೊಂಡು ಒಬ್ಬರೊನ್ನಬ್ಬರ ಕಾಲೆಳೆದುಕೊಂಡರು.
ಹಸರಂಗ ಮಿಮಿಕ್ ಮಾಡಿದ ಅಬ್ರಾರ್
ಶ್ರೀಲಂಕಾ ಬ್ಯಾಟಿಂಗ್ ವೇಳೆ 13ನೇ ಓವರ್ ನ ಮೊದಲ ಎಸೆತದಲ್ಲಿ ಪಾಕ್ ಬೌಲರ್ ಅಬ್ರಾರ್ ಹಸರಂಗಾರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ವೇಳೆ ಅಬ್ರಾರ್ ಹಸರಂಗ ಮಾದರಿಯಲ್ಲಿ ವಿಕೆಟ್ ಸಂಭ್ರಮಿಸಿದರು. ಆ ಹೊತ್ತಿಗಾಗಲೇ 15 ರನ್ ಗಳಿಸಿದ್ದ ಹಸರಂಗಾ ಪೇಚು ಮೊರೆ ಹೊತ್ತು ಪೆವಿಲಿಯನ್ ಸೇರಿಕೊಂಡರು.
ತಿರುಗೇಟು ಕೊಟ್ಟ ಹಸರಂಗಾ
ಬಳಿಕ ಪಾಕಿಸ್ತಾನ ಬ್ಯಾಟಿಂಗ್ ವೇಳೆ 6ನೇ ಓವರ್ ನಲ್ಲಿ ಮತೀಶ ತೀಕ್ಷಣ ಓವರ್ ಅಂತಿಮ ಎಸೆತದಲ್ಲಿ ಪಾಕಿಸ್ತಾನದ ಫಖರ್ ಜಮಾನ್ ಬ್ಯಾಟ್ ಅಂಚಿಗೆ ತಗುಲಿದ ಚೆಂಡನ್ನು ಹಸರಂಗ ಕ್ಯಾಚ್ ಪಡೆದರು. ಈ ವೇಳೆ ಹಸರಂಗ ಅಬ್ರಾರ್ ಕಣ್ಸನ್ನೆ ಸಂಭ್ರಮ ಮಾಡಿ ತಿರುಗೇಟು ನೀಡಿದರು. ಇಷ್ಟಕ್ಕೆ ಸುಮ್ಮನಾಗದ ಹಸರಂಗ ಮತ್ತೆ ಪಾಕಿಸ್ತಾನದ ಸ್ಯಾಮ್ ಅಯುಬ್ ರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕವೂ ಮತ್ತದೇ ಅಬ್ರಾರ್ ಕಣ್ಸನ್ನೆ ಸೆಲೆಬ್ರೇಷನ್ ಮಾಡಿ ಮತ್ತೆ ಅಬ್ರಾರ್ ಗೆ ಟಾಂಗ್ ನೀಡಿದರು.
ಪಂದ್ಯ ಮುಕ್ತಾಯದ ಬಳಿಕ ಪರಸ್ಪರ ಅಪ್ಪಿಕೊಂಡ ಆಟಗಾರರು
ಇನ್ನು ಪಾಕಿಸ್ತಾನ ಗೆಲುವಿನ ರನ್ ಗಳಿಸುತ್ತಲೇ ಮೈದಾನಕ್ಕೆ ಆಗಮಿಸಿದ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ವೇಳೆ ಅಬ್ರಾರ್ ಮತ್ತು ಹಸರಂಗ ಪರಸ್ಪರ ತಬ್ಬಿ ತಮ್ಮ ಸೆಲೆಬ್ರೇಷನ್ ಕುರಿತು ಮಾತನಾಡಿದರು.