ದುಬೈ: ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಗೆ ಟೀಂ ಇಂಡಿಯಾ ಟೆಸ್ಟ್ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಕನ್ನಡಿಗ ಕರುಣ್ ನಾಯರ್ ಬದಲಿಗೆ ಆರ್‌ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಕೆಲಸದ ಹೊರೆ ನಿರ್ವಹಣೆಯಿಂದಾಗಿ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದ್ದ ಬುಮ್ರಾ, ಅಕ್ಟೋಬರ್ 2 ರಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗುವ ಎರಡು ಪಂದ್ಯಗಳ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡಲಿದ್ದಾರೆ.
ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ರವೀಂದ್ರ ಜಡೇಜಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಇಂಗ್ಲೆಂಡ್ ಸರಣಿಯ ಸಮಯದಲ್ಲಿ ಮೂಳೆ ಮುರಿತಕ್ಕೊಳಗಾದ ಉಪನಾಯಕ ರಿಷಭ್ ಪಂತ್ ಇನ್ನೂ ಪೂರ್ಣ ಫಿಟ್ನೆಸ್ ಮರಳಿ ಪಡೆದಿಲ್ಲದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ.
'ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟೆಸ್ಟ್‌ಗಳಿಗೆ ಲಭ್ಯವಾಗುವ ಭರವಸೆ ಇದೆ' ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಇಲ್ಲಿ ಹೇಳಿದರು.
ಧ್ರುವ್ ಜುರೆಲ್ ಮತ್ತು ಎನ್ ಜಗದೀಶನ್ ತಂಡದಲ್ಲಿರುವ ಇಬ್ಬರು ವಿಕೆಟ್ ಕೀಪರ್‌ಗಳಾಗಿದ್ದು, ರಿಷಭ್ ಪಂತ್ ಅನುಪಸ್ಥಿತಿಯನ್ನು ಸರಿದೂಗಿಸಲು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ತಂಡ
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಶನ್ (ವಿಕೆಟ್ ಕೀಪರ್), ಮೊಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಬ್ ಯಾದವ್.