ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಅಭಿಷೇಕ್ ಶರ್ಮಾ (Abhishek Sharma) ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ (Virat kohli) ಮತ್ತು ಪಾಕಿಸ್ತಾನ ಸ್ಫೋಟಕ ಬ್ಯಾಟರ್ ಮಹಮದ್ ರಿಜ್ವಾನ್ (Mohammad Rizwan) ರ ದಾಖಲೆ ಮುರಿದಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 202 ಪೇರಿಸಿತು.
ಭಾರತದ ಈ ಬೃಹತ್ ಮೊತ್ತಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೇವಲ 31 ಎಸೆತಗಳಲ್ಲಿ ಅಭಿಷೇಕ್ ಶರ್ಮಾ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 61 ರನ್ ಪೇರಿಸಿದರು. ಆ ಮೂಲಕ ಹಾಲಿ ಟೂರ್ನಿಯಲ್ಲಿ ಸತತ 3ನೇ ಅರ್ಧಶತಕ ಸಿಡಿಸಿದರು.
ಹ್ಯಾಟ್ರಿಕ್ ಅರ್ಧಶತಕ
ಈ ಹಿಂದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ಎದುರು ಅರ್ಧಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ ಶ್ರೀಲಂಕಾ ವಿರುದ್ದ ಅಂತಿಮ ಸೂಪರ್ 4 ಹಂತದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದರು.
ಅಂತೆಯೇ ಸತತ ಮೂರು ಅರ್ಧಶತಕ ಸಿಡಿಸುವ ಮೂಲಕ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ ಅಭಿಶೇಕ್ ಶರ್ಮಾ ಈ ಮೂಲಕ ದಿಗ್ಗಜರ ವಿಶೇಷ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ರನ್
2025ರ ಏಷ್ಯಾಕಪ್‌ನಲ್ಲಿ ಅಭಿಷೇಕ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ಅರ್ಧಶತಕ ಬಾರಿಸಿರುವ ಅವರು, ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಏಷ್ಯಾಕಪ್ ಟೂರ್ನಿಗೂ ಮುನ್ನ ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ 137 ರನ್ ಬಾರಿಸಿ ಅಬ್ಬರಿಸಿದ್ದರು.
ಈ ಭರ್ಜರಿ ಶತಕದ ಬಳಿಕ ಇದೀಗ ಏಷ್ಯಾಕಪ್‌ನಲ್ಲಿ 30, 31, 38, 74, 75 ಹಾಗೂ 61 ರನ್ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸತತವಾಗಿ ಅತೀ ಹೆಚ್ಚು ಬಾರಿ 30+ ರನ್ ಕಲೆಹಾಕಿದ ವಿಶ್ವದ ಮೊದಲ ಎಡಗೈ ದಾಂಡಿಗ ಹಾಗೂ ಅತ್ಯಂತ ಕಿರಿಯ ಬ್ಯಾಟರ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಏಷ್ಯಾಕಪ್ ಇತಿಹಾಸದಲ್ಲೇ 300+ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕೊಹ್ಲಿ-ರಿಜ್ವಾನ್ ದಾಖಲೆ ಪತನ
ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ಅರ್ಧಶತಕ ಬಾರಿಸಿರುವ ಅವರು, ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ವಿರಾಟ್ ಕೊಹ್ಲಿ ದಾಖಲೆ ಮುರಿದು, 282ಕ್ಕೂ ಹೆಚ್ಚು ರನ್ ಕಲೆಹಾಕಿ ಎಲೈಟ್ ಕ್ಲಬ್ ಸೇರಿದ್ದಾರೆ.
ಶ್ರೀಲಂಕಾ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ 34 ರನ್ ಬಾರಿಸಿದ ಕೂಡಲೇ ಅಭಿಷೇಕ್ ಶರ್ಮಾ, ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದರು. ಈ ಸಾಧನೆ ಮಾಡುವ ಮೂಲಕ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರ ದಾಖಲೆ ಮುರಿದರು.
ಅಭಿಷೇಕ್ ಇದುವರೆಗೆ ಟೂರ್ನಮೆಂಟ್‌ನಲ್ಲಿ 282 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ, ಇದು ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್‌ಗಳಾಗಿದೆ.ಇದಕ್ಕೂ ಮೊದಲು, ಈ ದಾಖಲೆಯನ್ನು 2022 ರ ಟಿ20 ಏಷ್ಯಾಕಪ್‌ನಲ್ಲಿ 281 ರನ್ ಗಳಿಸಿದ ಮೊಹಮ್ಮದ್ ರಿಜ್ವಾನ್ ಹೊಂದಿದ್ದರು. ಅದೇ ವರ್ಷ ವಿರಾಟ್ ಕೊಹ್ಲಿ ಕೂಡ 276 ರನ್ ಬಾರಿಸಿದ್ದರು.
ಅಭಿಷೇಕ್ ಈಗ ಅವರಿಬ್ಬರನ್ನೂ ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ 250 ರನ್ ಗಳಿಸುವ ಮೂಲಕ ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಎಲೈಟ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ಟಿ20 ಟೂರ್ನಿಯಲ್ಲಿ ಭಾರತ ಪರ 250 ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಈ ಹಿಂದೆ, ರೋಹಿತ್ ಒಂದು ಟೂರ್ನಿಯಲ್ಲಿ 250 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ನಾಲ್ಕು ಟಿ20 ಟೂರ್ನಿಗಳಲ್ಲಿ 250 ರನ್ ಗಳಿಸಿದ್ದಾರೆ. ಇದಲ್ಲದೆ, ಅಭಿಷೇಕ್ ಶರ್ಮಾ ಟಿ20 ಏಷ್ಯಾ ಕಪ್‌ನ ಒಂದೇ ಆವೃತ್ತಿಯಲ್ಲಿ 300 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಿಕ್ಸರ್ ನಲ್ಲೂ ದಾಖಲೆ
ಏಷ್ಯಾಕಪ್ ಟೂರ್ನಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಕೂಡ ಅಭಿಷೇಕ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ಭರ್ಜರಿ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ (14) ಹೆಸರಿನಲ್ಲಿತ್ತು. ಆದರೆ ಈ ಬಾರಿಯ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ 19 ಸಿಕ್ಸ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.