ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವು ಸಂಕಷ್ಟಕ್ಕೆ ಸಿಲುಕಿದೆ ಎಂಬ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ತಂಡವು ಸದ್ಯ ಪರಿವರ್ತನೆಯ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಗಂಭೀರ್, ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ತಂಡದ ಹೊಸ core ರೂಪುಗೊಳ್ಳುತ್ತಿದೆ. ಅಲ್ಲದೆ, ಸದ್ಯ ತಂಡದ ಗಮನವು ಟ್ರೋಫಿಗಳನ್ನು ಗೆಲ್ಲುವುದರ ಮೇಲಿದೆಯೇ ಹೊರತು, ರ್ಯಾಂಕಿಂಗ್‌ಗಳು ಅಥವಾ ಹೊರಗಿನ ಟೀಕೆಗಳ ಬಗ್ಗೆ ಚಿಂತಿಸುವುದರ ಮೇಲಲ್ಲ. ಟೀಕೆಗಳೇ? ಟ್ರೋಫಿಗಳನ್ನು ಗೆಲ್ಲುವುದು ನನ್ನ ಕೆಲಸ. ನಾನು ನಂಬುವುದು ಮತ್ತು ಗಮನಹರಿಸುವುದು ಅದನ್ನಷ್ಟೇ. ನನಗೂ ಇತರರಿಗೂ ಇರುವ ವ್ಯತ್ಯಾಸವಿದು. ಟೀಕೆಗಳು ಅಥವಾ 'ಲೈಕ್ಸ್' ಬಗ್ಗೆ ನನಗೆ ಯಾವುದೇ ಕಾಳಜಿಯಿಲ್ಲ' ಎಂದು ಗಂಭೀರ್ ಹೇಳಿದರು.
'ಶ್ರೇಯಾಂಕಗಳು ಮುಖ್ಯವಲ್ಲ. ನಾವು ಯಾವುದೇ ಸಂಕಷ್ಟದಲ್ಲಿಲ್ಲ. ಇಂಗ್ಲೆಂಡ್ ಪ್ರವಾಸದ ನಂತರ ನಾವು ಉತ್ತಮ ಮಟ್ಟದ ಟೆಸ್ಟ್ ಕ್ರಿಕೆಟ್ ಆಡಿದ್ದೇವೆ. ಟ್ರೋಫಿಗಳನ್ನು ಗೆಲ್ಲುವುದೇ ನನ್ನ ಕೆಲಸ. ನಾನು ಅದಕ್ಕಷ್ಟೇ ಆದ್ಯತೆ ನೀಡುತ್ತೇನೆ ಮತ್ತು ಅದನ್ನು ನಂಬುತ್ತೇನೆ' ಎಂದು ಅವರು ಹೇಳಿದರು.
ಗಂಭೀರ್ ಅವರು ಜವಾಬ್ದಾರಿ ವಹಿಸಿಕೊಂಡಾಗಿನಿಂದ ಟೆಸ್ಟ್ ತಂಡವು ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿ, ಆರ್ ಅಶ್ವಿನ್ ಮತ್ತು ರೋಹಿತ್ ಶರ್ಮಾ ಈ ಮಾದರಿಯಿಂದ ನಿವೃತ್ತರಾದರು; ಜೊತೆಗೆ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲುಗಳಂತಹ ಫಲಿತಾಂಶಗಳು ಕೋಚ್ ಮತ್ತು ತಂಡದ ಮೇಲೆ ತೀವ್ರ ಒತ್ತಡ ಉಂಟುಮಾಡಿದವು. ಆದಾಗ್ಯೂ, ಕ್ರಿಕೆಟ್‌ನಲ್ಲಿ ಇಂತಹ ಏರಿಳಿತಗಳು ಸಹಜ ಎಂದು ಗಂಭೀರ್ ಹೇಳಿದರು.
'ಕ್ರಿಕೆಟ್‌ನಲ್ಲಿ ಏಳು-ಬೀಳುಗಳು ಸಹಜ; ನಾವು ನಮ್ಮ ಆಟಗಾರರಿಗೆ ಬೆಂಬಲ ನೀಡಬೇಕು ಮತ್ತು ಅವರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಇದು ಕೇವಲ ಒಂದೆರಡು ಪಂದ್ಯಗಳ ಆಧಾರದ ಮೇಲಷ್ಟೇ ನಿರ್ಧಾರವಾಗುವ ವಿಷಯವಲ್ಲ. ಎದುರಾಳಿ ತಂಡದ 20 ವಿಕೆಟ್‌ಗಳನ್ನು ಕಬಳಿಸಬಲ್ಲ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಕಣಕ್ಕಿಳಿಸಲು ನಾವು ಪ್ರಯತ್ನಿಸುತ್ತೇವೆ. ಕುಲದೀಪ್ ಉತ್ತಮ ಬೌಲರ್, ಆದರೆ ಕೆಲವೊಮ್ಮೆ ನಿರ್ಧಾರವು ನಾಯಕನ ವಿವೇಚನೆಗೆ ಬಿಟ್ಟ ವಿಷಯವೂ ಆಗಿರುತ್ತದೆ' ಎಂದು ಅವರು ಹೇಳಿದರು.
'ಮೂರು ಪಂದ್ಯಗಳ ಟೆಸ್ಟ್ ಸರಣಿಯೇ ಸೂಕ್ತ. ಪಂದ್ಯಗಳ ನಡುವೆ ಕಡಿಮೆ ಅಂತರವಿದ್ದರೂ ಪರವಾಗಿಲ್ಲ, ನಮ್ಮ ದೇಹವನ್ನು ಹೇಗೆ ನಿಭಾಯಿಸಬೇಕು ಮತ್ತು ಚೇತರಿಸಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ನಾವು ಐಚ್ಛಿಕ ಅಭ್ಯಾಸದ ಅವಕಾಶ ನೀಡುತ್ತೇವೆ ಮತ್ತು ಬೌಲರ್‌ಗಳಿಗೆ ವಿಶ್ರಾಂತಿ ಕಲ್ಪಿಸುತ್ತೇವೆ. ಹೀಗಾಗಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯೇ ಉತ್ತಮ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಕೇವಲ ಎರಡು ಪಂದ್ಯಗಳಿರುವಾಗ ಕೆಲವೊಮ್ಮೆ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತರೆ, ಎದುರಾಳಿ ತಂಡಕ್ಕೆ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ; ಆಗ ಅವರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಪ್ರಯತ್ನಿಸಬಹುದಷ್ಟೇ...' ಎಂದರು.