ದುಬೈ: ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೈದಾನದಲ್ಲಿ ನಡೆದ ವಾಗ್ವಾದಕ್ಕಾಗಿ, ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗದ ಬೌಲರ್ ಅಸಿತಾ ಫರ್ನಾಂಡೋ ಅವರಿಗೆ ಸೋಮವಾರ ಪಂದ್ಯದ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.
ಇದರೊಂದಿಗೆ ಉಭಯ ಆಟಗಾರರಿಗೂ ತಲಾ ಒಂದು 'ಡಿಮೆರಿಟ್ ಪಾಯಿಂಟ್' ಕೂಡ ನೀಡಲಾಗಿದೆ.
ಭಾರತದ ಮೊದಲ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಫರ್ನಾಂಡೋ ಅವರು ಜೈಸ್ವಾಲ್ ಅವರನ್ನು ಔಟ್ ಮಾಡಿದ ನಂತರ ಆಟಗಾರರ ನಡುವೆ ಸಂಘರ್ಷ ಉಂಟಾಯಿತು. ಜೈಸ್ವಾಲ್ ಅವರು ಪೆವಿಲಿಯನ್ ಕಡೆಗೆ ನಡೆದು ಹೋಗುತ್ತಿದ್ದಾಗ ಫರ್ನಾಂಡೋ ಅವರು ಬೀಳ್ಕೊಟ್ಟ ರೀತಿಗೆ ಜೈಸ್ವಾಲ್ ಕೆರಳಿದರು. ಮತ್ತೆ ಫರ್ನಾಂಡೋ ಅವರತ್ತ ನಡೆದುಹೋದರು ಮತ್ತು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು; ಈ ವೇಳೆ ಫರ್ನಾಂಡೋ ಮತ್ತು ಜೈಸ್ವಾಲ್ ಅವರ ಹೆಲ್ಮೆಟ್ ತಗುಲಿತು.
'ಉಭಯ ಆಟಗಾರರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು ಮತ್ತು ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರೀಸ್‌ನ ಆಂಡಿ ಪೈಕ್ರಾಫ್ಟ್ ಅವರು ಪ್ರಸ್ತಾಪಿಸಿದ ಶಿಸ್ತು ಕ್ರಮಗಳನ್ನು ಅಂಗೀಕರಿಸಿದರು; ಹೀಗಾಗಿ, ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿ ನೀತಿ ಸಂಹಿತೆಯ ವಿಧಿ 2.12 ಅನ್ನು ಈ ಇಬ್ಬರೂ ಆಟಗಾರರು ಉಲ್ಲಂಘಿಸಿರುವುದು ಕಂಡುಬಂದಿದೆ; ಈ ವಿಧಿಯು 'ಆಟಗಾರ, ಆಟಗಾರರ ಸಹಾಯಕ ಸಿಬ್ಬಂದಿ, ಅಂಪೈರ್, ಪಂದ್ಯದ ರೆಫರಿ ಅಥವಾ ಇನ್ನಾವುದೇ ವ್ಯಕ್ತಿಯೊಂದಿಗೆ (ಅಂತರರಾಷ್ಟ್ರೀಯ ಪಂದ್ಯದ ವೇಳೆ ಪ್ರೇಕ್ಷಕರನ್ನೂ ಒಳಗೊಂಡಂತೆ) ಅನುಚಿತ ದೈಹಿಕ ಸಂಪರ್ಕ'ಕ್ಕೆ ಸಂಬಂಧಿಸಿದೆ.
'ಇದರ ಜೊತೆಗೆ, ಫರ್ನಾಂಡೋ ಮತ್ತು ಜೈಸ್ವಾಲ್ ಅವರಿಗೆ ತಲಾ ಒಂದೊಂದು 'ಡಿಮೆರಿಟ್ ಪಾಯಿಂಟ್' ನೀಡಲಾಗಿದೆ; ಇವರಿಬ್ಬರೂ ಕಳೆದ 24 ತಿಂಗಳ ಅವಧಿಯಲ್ಲಿ ಯಾವುದೇ ಇತರ ಉಲ್ಲಂಘನೆಗಳನ್ನು ಹೊಂದಿಲ್ಲ' ಎಂದು ಹೇಳಿಕೆ ತಿಳಿಸಿದೆ.
ಎರಡನೇ ದಿನದಾಟ ಆರಂಭಕ್ಕೂ ಮುನ್ನ ಜೈಸ್ವಾಲ್ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾ, 'ಅವರು ಏನು ಹೇಳಿದರು ಎಂಬುದು ನಿಮಗೆ ತಿಳಿದಿಲ್ಲದಿದ್ದರೆ, ದಯವಿಟ್ಟು ಯಾವುದೇ ತೀರ್ಮಾನಕ್ಕೆ ಬರಬೇಡಿ. ಯಾರಾದರೂ ಮಿತಿ ಮೀರಿದರೆ, ಇದು ಭಾರತ, ನಾವು ಹೋರಾಡುತ್ತೇವೆ ಮತ್ತು ಪ್ರತ್ಯುತ್ತರ ನೀಡುತ್ತೇವೆಂದು' ನಾವು ಅವರಿಗೆ ತಿಳಿಸಬೇಕಾಗುತ್ತದೆ ಎಂದು ಹೇಳಿದರು.
ಮೈದಾನದಲ್ಲಿನ ಅಂಪೈರ್‌ಗಳಾದ ಅಹ್ಸಾನ್ ರಜಾ ಮತ್ತು ಶರಫುದ್ದೌಲಾ ಇಬ್ನೆ ಶಾಹಿದ್, ಮೂರನೇ ಅಂಪೈರ್ ರಾಡ್ ಟಕರ್ ಹಾಗೂ ನಾಲ್ಕನೇ ಅಂಪೈರ್ ಪ್ರಗೀತ್ ರಾಂಬುಕ್ವೆಲ್ಲಾ ಅವರು ಈ ಆರೋಪವನ್ನು ಹೊರಿಸಿದರು.
'ಲೆವೆಲ್ 1' ಉಲ್ಲಂಘನೆಗಳಿಗೆ ಕನಿಷ್ಠ ಶಿಕ್ಷೆಯಾಗಿ ಅಧಿಕೃತ ಎಚ್ಚರಿಕೆ ಹಾಗೂ ಗರಿಷ್ಠ ಶಿಕ್ಷೆಯಾಗಿ ಆಟಗಾರನ ಪಂದ್ಯದ ಸಂಭಾವನೆಯ ಶೇ 50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ.