ಮುಂಬರುವ ಐಪಿಎಲ್ 2027ನೇ ಆವೃತ್ತಿಗೂ ಮುನ್ನ ಸಂಭಾವ್ಯ ಐಪಿಎಲ್ ಟ್ರೇಡ್ ಬಗ್ಗೆ ವ್ಯಾಪಕ ಊಹಾಪೋಹಗಳು ಕೇಳಿಬರುತ್ತಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ ಯೋಜನೆಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇನ್ನೂ ಇದ್ದಾರೆ ಎಂದು Revsportz ವರದಿ ಮಾಡಿದೆ. ಮುಂಬೈ ಇಂಡಿಯನ್ಸ್ ಜೊತೆಗಿನ ಟ್ರೇಡ್ ಡೀಲ್‌ನಲ್ಲಿ ಜೈಸ್ವಾಲ್ ಭಾಗವಾಗಬಹುದು ಮತ್ತು ಇದರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಇರಬಹುದು ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಆದಾಗ್ಯೂ, ತಂಡವನ್ನು ತೊರೆಯುವ ಯಾವುದೇ ಇಚ್ಛೆಯ ಬಗ್ಗೆ ಜೈಸ್ವಾಲ್ ಫ್ರಾಂಚೈಸಿಗೆ ತಿಳಿಸಿಲ್ಲ ಎಂದು ರಾಜಸ್ಥಾನ ರಾಯಲ್ಸ್ ಮೂಲಗಳು ಸ್ಪಷ್ಟಪಡಿಸಿವೆ.
'ಅವರು (ಜೈಸ್ವಾಲ್) ತಂಡವನ್ನು ತೊರೆಯುವ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಮುಂದಿನ ಸೀಸನ್‌ಗಾಗಿ ನಾವು ಅವರನ್ನು ನಮ್ಮ ತಂಡದ ಪ್ರಮುಖ ಆಟಗಾರರನ್ನಾಗಿ ಇರಿಸಿಕೊಂಡೇ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಾವು ಕೆಲವು ವದಂತಿಗಳನ್ನು ಕೇಳಿದ್ದೇವೆ, ಆದರೆ ನಮ್ಮ ದೃಷ್ಟಿಯಲ್ಲಿ ಜೈಸ್ವಾಲ್ ಖಂಡಿತವಾಗಿಯೂ ನಮ್ಮ ಆಟಗಾರರಾಗಿದ್ದಾರೆ' ಎಂದು ರಾಜಸ್ಥಾನ್ ರಾಯಲ್ಸ್‌ನ ಉನ್ನತ ಅಧಿಕಾರಿಯೊಬ್ಬರು 'ರೆವ್‌ಸ್ಪೋರ್ಟ್ಸ್'ಗೆ ತಿಳಿಸಿದ್ದಾರೆ.
ಮತ್ತೊಂದೆಡೆ ಮುಂದಿನ ಆವೃತ್ತಿಗೂ ಮುನ್ನ, ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್ ನೋಡುತ್ತಿದೆ ಎಂದು ಹಲವು ವರದಿಗಳು ಹೇಳಿವೆ. 2015ರಲ್ಲಿ ಮುಂಬೈ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಆಲ್‌ರೌಂಡರ್, 2022ರ ಆವೃತ್ತಿಗೆ ಮುನ್ನ ಫ್ರಾಂಚೈಸಿ ತೊರೆದು ಗುಜರಾತ್ ಟೈಟಾನ್ಸ್ ಸೇರಿದರು. ಹಾರ್ದಿಕ್ ತಮ್ಮ ಚೊಚ್ಚಲ ಆವೃತ್ತಿಯಲ್ಲೇ ಜಿಟಿಯನ್ನು ಪ್ರಶಸ್ತಿಗೆ ಮುನ್ನಡೆಸಿದರು ಮತ್ತು ಇನ್ನೊಂದು ವರ್ಷವೂ ನಾಯಕನಾಗಿ ಮುಂದುವರಿದರು. ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದರು. ಆಗ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸಿದ ಹಾರ್ದಿಕ್ ಅಂದುಕೊಂಡಂತೆ ಏನೂ ಆಗಲಿಲ್ಲ. ಮುಂಬೈ ಐಪಿಎಲ್ 2024ರ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಮುಂದಿನ ಆವೃತ್ತಿಯಲ್ಲಿ, ಮುಂಬೈ ತಂಡ ಕ್ವಾಲಿಫೈಯರ್ 2ಗೆ ಪ್ರವೇಶಿಸಿತು. ಐಪಿಎಲ್ 2026ರಲ್ಲಿ ಒಂಬತ್ತನೇ ಸ್ಥಾನದಲ್ಲಿ ಉಳಿಯಿತು.
ಈಮಧ್ಯೆ, ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಮೈದಾನದಲ್ಲಿ ನಡೆದ ವಾಗ್ವಾದಕ್ಕಾಗಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗದ ಬೌಲರ್ ಅಸಿತಾ ಫರ್ನಾಂಡೋ ಅವರಿಗೆ ಐಸಿಸಿ ಅವರ ಪಂದ್ಯದ ಸಂಭಾವನೆಯ ಶೇ 25ರಷ್ಟು ದಂಡ ವಿಧಿಸಿದ್ದು, ಇಬ್ಬರಿಗೂ ತಲಾ ಒಂದು 'ಡಿಮೆರಿಟ್ ಪಾಯಿಂಟ್' ನೀಡಲಾಗಿದೆ.
ಭಾರತದ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಫರ್ನಾಂಡೋ ಅವರು ಜೈಸ್ವಾಲ್ ಅವರನ್ನು ಔಟ್ ಮಾಡಿದ ನಂತರ ಆಟಗಾರರ ನಡುವೆ ಸಂಘರ್ಷ ಉಂಟಾಯಿತು. ಜೈಸ್ವಾಲ್ ಅವರು ಫರ್ನಾಂಡೋ ಅವರತ್ತ ನಡೆದುಹೋದರು ಮತ್ತು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಇಬ್ಬರ ತಲೆಗಳೂ ಪರಸ್ಪರ ತಾಗಿದವು.
'ಉಭಯ ಆಟಗಾರರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು ಮತ್ತು ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರೀಸ್‌ನ ಆಂಡಿ ಪೈಕ್ರಾಫ್ಟ್ ಅವರು ಪ್ರಸ್ತಾಪಿಸಿದ ಶಿಸ್ತು ಕ್ರಮಗಳನ್ನು ಅಂಗೀಕರಿಸಿದರು; ಹೀಗಾಗಿ, ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.