ಹೊಟ್ಟೆ ಸೋಂಕು ಮತ್ತು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ, ಫೆಬ್ರುವರಿ 15 ರಂದು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ವದ T20 ವಿಶ್ವಕಪ್ ಗ್ರೂಪ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ. ಅಭಿಷೇಕ್ ಶರ್ಮಾ ಅವರನ್ನು ಬುಧವಾರ ದೆಹಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಳಿಕ, ಗುರುವಾರವೂ ಅಭಿಷೇಕ್ ಕೋಟ್ಲಾದಲ್ಲಿ ಭಾರತದ ಅಭ್ಯಾಸದ ವೇಳೆ ಕಾಣಿಸಿಕೊಳ್ಳಲಿಲ್ಲ. ಬಳಿಕ ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಅವರು ಗೈರಾಗಿದ್ದರು.
ನಮೀಬಿಯಾ ವಿರುದ್ಧದ ಗೆಲುವಿನ ನಂತರ ಮಾತನಾಡಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, 'ನಾನು ಅವರೊಂದಿಗೆ ಮಾತನಾಡಿದ್ದೇನೆ. ಸದ್ಯ ಅವರು ಚೆನ್ನಾಗಿ ಕಾಣಿಸುತ್ತಿದ್ದಾರೆ. ಅವರು ಇಂದು ಸ್ವಲ್ಪ ಅಭ್ಯಾಸ ಮಾಡಿದರು. ಅವರು ಚೇತರಿಕೆಯ ದಾರಿಯಲ್ಲಿದ್ದಾರೆ ಎಂದು ನನಗೆ ಹೇಳಿದರು' ಎಂದರು.
ಭಾನುವಾರ ಕೊಲಂಬೊದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದತ್ತಲೇ ಇದೀಗ ಬಹುತೇಕರ ಚಿತ್ತ ನೆಟ್ಟಿದೆ.
ಸ್ವಲ್ಪ ತೂಕ ಕಡಿಮೆಯಾಗಿದೆ ಮತ್ತು ತೀವ್ರವಾದ ಹೊಟ್ಟೆಯ ಸೋಂಕಿನಿಂದಾಗಿ ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆರಂಭಿಕರಾಗಿ ಕಣಕ್ಕಿಳಿಯಲು ಶಕ್ತಿ ಮತ್ತು ಸಹಿಷ್ಣುತೆಯನ್ನು ಮರಳಿ ಪಡೆಯುತ್ತಾರೆ. ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆಯುವ ಮೊದಲು ಒಂದೋ ಎರಡೋ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ ಎಂದು ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದರು.
'ಅಭಿಷೇಕ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹಾಗಾಗಿ, ಒಂದು ಅಥವಾ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು' ಎಂದು ನಾಯಕ ಹೇಳಿರುವುದರಿಂದ ಇದೀಗ ಪಾಕಿಸ್ತಾನ ವಿರುದ್ಧದ ಮುಂಬರುವ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಅವರ ಲಭ್ಯತೆ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.
ಅಭಿಷೇಕ್ ಶರ್ಮಾ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಅವರೇ ಇಶಾನ್ ಕಿಶನ್ ಜೊತೆಗೆ ಆರಂಭಿಕರಾಗಿ ಬ್ಯಾಟಿಂಗ್ ಮಾಡಬಹುದು ಎನ್ನಲಾಗಿದೆ.
ಕೊಲಂಬೊದಲ್ಲಿ ಅಭಿಷೇಕ್ ಅವರ ತರಬೇತಿ ಅವಧಿಯು ಇದೀಗ ಅವರು ಹೇಗೆ ಚೇತರಿಸಿಕೊಂಡಿದ್ದಾರೆ ಎಂಬುದರ ಸೂಚಕವಾಗಿದೆ ಎಂದು ತಿಳಿದುಬಂದಿದೆ. ವಾಡಿಕೆಯ ನೆಟ್‌ಗಳಲ್ಲಿ ಸಾಮಾನ್ಯವಾಗಿ ಮಾಡುವಂತೆ ದೀರ್ಘಾವಧಿಯವರೆಗೆ ಅವರು ಬ್ಯಾಟ್ ಮಾಡಿದರೆ, ಅವರನ್ನು ಪಂದ್ಯದಲ್ಲಿ ಪರಿಗಣಿಸುವುದು ಒಳ್ಳೆಯದು ಎಂಬ ಮಾತುಗಳು ಕೇಳಿಬರುತ್ತಿವೆ.