14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್, ತಮ್ಮ ಮಗ ಈ ವರ್ಷ 10ನೇ ತರಗತಿ ಪರೀಕ್ಷೆಯನ್ನು ತಪ್ಪಿಸಿಕೊಂಡು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯತ್ತ ಗಮನಹರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಮುಂದಿನ ತಿಂಗಳು ಪಂದ್ಯಾವಳಿ ಆರಂಭವಾಗಲಿದ್ದು, ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ತಂಡದ ನಾಗ್ಪುರದಲ್ಲಿ ಅವರ ಪೂರ್ವ-ಆವೃತ್ತಿಯ ಶಿಬಿರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. 'ನನ್ನ ಮಗ ರಾಜಸ್ಥಾನ ರಾಯಲ್ಸ್ ಐಪಿಎಲ್ ತಂಡದ ಸದಸ್ಯರೊಂದಿಗೆ ನಾಗ್ಪುರದಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಈ ವರ್ಷ ಅವನ ಪರೀಕ್ಷೆಗಳ ಬಗ್ಗೆ ಸಾಕಷ್ಟು ಪ್ರಚಾರವಿತ್ತು. ಆದ್ದರಿಂದ, ಅವನು ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದಾನೆ' ಎಂದು ಸಂಜೀವ್ ದಿ ಮಿಡ್-ಡೇಗೆ ತಿಳಿಸಿದರು.
ವೈಭವ್ ಪರೀಕ್ಷೆಗೆ ಹಾಜರಾಗಿದ್ದರೆ, ಅವನು ತನ್ನ ಆಟದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ ಅಥವಾ ಪರೀಕ್ಷೆ ಮೇಲೂ ಅವನಿಗೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
'ತಮ್ಮ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ, ಸದ್ಯ ಅವನ ಗಮನ ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಸಾಗಿದೆ. ವೈಭವ್ ಶಾಲೆಯಲ್ಲಿ ನಿಯಮಿತವಾಗಿ ಓದುತ್ತಿದ್ದಾಗ ಅಧ್ಯಯನದಲ್ಲಿ ಉತ್ತಮರಾಗಿದ್ದ. ಆತ ಎಲ್ಲ ವಿಷಯಗಳಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದನು. ಆದರೆ, ಈಗ ಆತನ ಆದ್ಯತೆ ಕ್ರಿಕೆಟ್ ಆಗಿದೆ' ಎಂದು ಸಂಜೀವ್ ಹೇಳಿದರು.
ಫೆಬ್ರುವರಿ 17ರಿಂದ 10ನೇ ತರಗತಿಯ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಆರಂಭವಾಗಿದ್ದು, ಮಂಗಳವಾರ ವೈಭವ್ ಬಿಹಾರದ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಾಜರಾಗಲಿಲ್ಲ. ಹೀಗಾಗಿ, ಅವರನ್ನು ಗೈರೆಂದು ಗುರುತಿಸಲಾಗಿದೆ.
ANI ಜೊತೆ ಮಾತನಾಡಿದ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಎನ್.ಕೆ. ಸಿನ್ಹಾ, ಸಿಬಿಎಸ್ಇ ನೀತಿಗೆ ಅನುಗುಣವಾಗಿ ಸೂರ್ಯವಂಶಿಯನ್ನು ಗೈರುಹಾಜರೆಂದು ಗುರುತಿಸಲಾಗಿದೆ ಎಂದು ಹೇಳಿದರು.
'ಅವರು ಇಂದು ಗೈರುಹಾಜರಾಗಿದ್ದಾರೆ. ಅವರು ಪರೀಕ್ಷಾ ಕೇಂದ್ರಕ್ಕೆ ಬಂದಿಲ್ಲ. ಸಿಬಿಎಸ್‌ಇ ನೀತಿಯ ಪ್ರಕಾರ, ನಾವು ಅವರನ್ನು ಗೈರು ಎಂದು ಗುರುತಿಸಿದ್ದೇವೆ. ಯಾವುದೇ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿಲ್ಲದಿದ್ದರೆ ಅವರನ್ನು ನಾವು ಗೈರೆಂದು ಗುರುತಿಸಬೇಕು. ಅವರು ಬಂದು ಪರೀಕ್ಷೆ ಬರೆಯುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ಆದರೆ, ಅವರಿಗೆ ಕ್ರಿಕೆಟ್ ಪಂದ್ಯ ಅಥವಾ ಅಭ್ಯಾಸ ಇರಬಹುದು. ಅವರು ಖಂಡಿತವಾಗಿಯೂ ಮುಂದಿನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಸಿನ್ಹಾ ಹೇಳಿದರು.
ಈ ತಿಂಗಳ ಆರಂಭದಲ್ಲಿ, ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 80 ಎಸೆತಗಳಲ್ಲಿ 175 ರನ್ ಗಳಿಸಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈಭವ್ ಸೂರ್ಯವಂಶಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.