ಭಾನುವಾರ ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ನ್ಯೂಜಿಲೆಂಡ್‌ನ ಆರಂಭಿಕ ಆಟಗಾರರಾದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಉತ್ತಮ ಆರಂಭವನ್ನು ಪಡೆಯುತ್ತಿದ್ದಂತೆ, ಭಾರತದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರಿಗೆ ಅವರ ಮಾತೃಭಾಷೆ ತಮಿಳಿನಲ್ಲಿ ಸೂಚನೆಗಳನ್ನು ನೀಡಿದರು. ಈ ವೇಳೆ ವಾಷಿಂಗ್ಟನ್ ಅವರಿಗೆ ಅರ್ಥವಾಗಲೆಂದು ರಾಹುಲ್ ತಮಿಳನ್ನು ಬಳಸಿರಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ವರುಣ್ ಆ್ಯರನ್ ಹೇಳಿದರು. ಆದರೆ, ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ತಾವು 'ರಾಷ್ಟ್ರೀಯ ಭಾಷೆ'ಯನ್ನು ಬಯಸುವುದಾಗಿ ಹೇಳಿದರು.
ರಾಹುಲ್ ವಾಷಿಂಗ್ಟನ್‌ಗೆ ತಮ್ಮ ಎಸೆತಗಳ ಪೇಸ್ ಅನ್ನು ಕಡಿಮೆ ಮಾಡುವಂತೆ ಸೂಚನೆ ನೀಡುತ್ತಿರುವುದು ಸ್ಟಂಪ್ ಮೈಕ್ ಮೂಲಕ ಕೇಳಿಸಿದೆ.
ವೀಕ್ಷಕ ವಿವರಣೆಗಾರರಾದ ವರುಣ್ ಆರನ್ ಮತ್ತು ಸಂಜಯ್ ಬಂಗಾರ್ ನಡುವಿನ ಸಂಭಾಷಣೆ ಇಲ್ಲಿದೆ:
ವರುಣ್ ಆರನ್: 'ಕೆಎಲ್ ರಾಹುಲ್ ಅವರು ವಾಷಿಂಗ್ಟನ್ ಸುಂದರ್ ಜೊತೆ ತಮಿಳಿನಲ್ಲಿ ಮಾತನಾಡಬೇಕಾಗಬಹುದು. ಅವರು ವಾಷಿಂಗ್ಟನ್ ಅವರಿಗೆ ಮೀಡಿಯಂ ವೇಗಿಯಂತೆ ಅಲ್ಲ, ನಿಧಾನವಾಗಿ ಬೌಲಿಂಗ್ ಮಾಡಲು ಹೇಳುತ್ತಿದ್ದಾರೆ. ಸಂಜಯ್ ಭಾಯ್, ವಾಷಿಂಗ್ಟನ್ ತಮಿಳು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ನೀವು ಒಪ್ಪುವುದಿಲ್ಲವೇ?'
ಸಂಜಯ್ ಬಂಗಾರ್: 'ನಾನು ರಾಷ್ಟ್ರೀಯ ಭಾಷೆಯಲ್ಲಿ ಹೆಚ್ಚು ನಂಬಿಕೆ ಇಡುತ್ತೇನೆ'.
ವರುಣ್ ಆರನ್: 'ನಾನು ಪ್ರಾದೇಶಿಕ ಭಾಷೆಗಳನ್ನು ಮಾತ್ರ ನಂಬುತ್ತೇನೆ ಎಂದು ನಾನೆಲ್ಲಿ ಹೇಳುತ್ತಿದ್ದೇನೆ?'
ಸಂಜಯ್ ಬಂಗಾರ್: 'ನೋಡಿ, ಅವರು ಹಿಂದಿನ ಚೆಂಡನ್ನು 92 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದರು. ಆದ್ದರಿಂದ ಅದು (ಭಾಷೆ) ಅಷ್ಟು ಮುಖ್ಯ ಎಂದು ನಾನು ಭಾವಿಸುವುದಿಲ್ಲ'.
ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಆದರೆ, ಭಾರತದ ಸಂವಿಧಾನದ ಎಂಟನೇ ವಿಧಿ ಅಡಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅಧಿಕೃತ ಭಾಷೆಗಳ ಸ್ಥಾನಮಾನವನ್ನು ಹೊಂದಿವೆ ಎಂಬುದನ್ನು ಗಮನಿಸಬೇಕು.
ಭಾರತಕ್ಕೆ ಸರಣಿಯಲ್ಲಿ 1-0 ಮುನ್ನಡೆ
ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿದರೆ, ನಾಯಕ ಶುಭಮನ್ ಗಿಲ್ 56 ರನ್ ಗಳಿಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಲು ನೆರವಾದರು. ಈ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಕೊಹ್ಲಿ ತಮ್ಮ ಅದ್ಭುತ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಭಾರತ 301 ರನ್‌ಗಳ ಗುರಿಯನ್ನು ಇನ್ನೂ ಆರು ಎಸೆತಗಳು ಬಾಕಿ ಇರುವಾಗಲೇ ತಲುಪಲು ಸಹಾಯ ಮಾಡಿದರು. ಶ್ರೇಯಸ್ ಅಯ್ಯರ್ 49 ರನ್ ಗಳಿಸುವ ಮೂಲಕ ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 306 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 10 ಓವರ್‌ಗಳಲ್ಲಿ 41 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರೆ, ಆದಿತ್ಯ ಅಶೋಕ್ ಮತ್ತು ಕ್ರಿಸ್ಟಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು, ಭಾರತೀಯ ಬೌಲರ್‌ಗಳು, ವಿಶೇಷವಾಗಿ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಸಿರಾಜ್, ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು. ಡೆರಿಲ್ ಮಿಚೆಲ್ ಅವರ ಆಕರ್ಷಕ ಅರ್ಧಶತಕ ನ್ಯೂಜಿಲೆಂಡ್ ಅನ್ನು 8 ವಿಕೆಟ್ ನಷ್ಟಕ್ಕೆ 300 ರನ್‌ಗಳಿಸಲು ನೆರವಾಯಿತು. ಹರ್ಷಿತ್ (2/65), ಸಿರಾಜ್ (2/40) ಮತ್ತು ಪ್ರಸಿದ್ಧ್ ಕೃಷ್ಣ (2/60) ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.