ನವದೆಹಲಿ: ದೇಶದ ಕ್ರಿಕೆಟಿಗರ ವಿರುದ್ಧ ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಗುರುವಾರ ತನ್ನ ನಿರ್ದೇಶಕ ಎಂ ನಜ್ಮುಲ್ ಇಸ್ಲಾಂ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಮಾಜಿ ನಾಯಕ ತಮೀಮ್ ಇಕ್ಬಾಲ್ ಸೇರಿದಂತೆ ಹಿರಿಯ ಆಟಗಾರರನ್ನು ಗುರಿಯಾಗಿಸಿಕೊಂಡು ಮಾಡಿದ ಹೇಳಿಕೆಗಳಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕ ಎಂ ನಜ್ಮುಲ್ ಇಸ್ಲಾಂ ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ಅಂತಿಮ ಎಚ್ಚರಿಕೆ ನೀಡಿದೆ.
'ಸಂಬಂಧಪಟ್ಟ ಸದಸ್ಯರ ವಿರುದ್ಧ ಮಂಡಳಿಯು ಈಗಾಗಲೇ ಔಪಚಾರಿಕ ಶಿಸ್ತು ಕ್ರಮಗಳನ್ನು ಪ್ರಾರಂಭಿಸಿದೆ. ಶೋಕಾಸ್ ಲೆಟರ್ ನೀಡಲಾಗಿದೆ ಮತ್ತು 48 ಗಂಟೆಗಳ ಒಳಗೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ವಿಷಯವನ್ನು ಸೂಕ್ತ ಪ್ರಕ್ರಿಯೆಯ ಮೂಲಕ ನಿಭಾಯಿಸಲಾಗುವುದು ಮತ್ತು ವಿಚಾರಣೆಯ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ.
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಾರ, ಕೆಲವು ಮಂಡಳಿಯ ನಿರ್ದೇಶಕರು ಬುಧವಾರ CWAB ಅಧ್ಯಕ್ಷ ಮೊಹಮ್ಮದ್ ಮಿಥುನ್ ಅವರನ್ನು ಸಂಪರ್ಕಿಸಿ, ನಜ್ಮುಲ್ ಅವರನ್ನು ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಪ್ರಸ್ತಾವನೆ ಸಲ್ಲಿಸಿದರು. ಈಮಧ್ಯೆ, ಕ್ರಿಕೆಟಿಗರು ಬಹಿಷ್ಕರಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿಲ್ಲ ಮತ್ತು ಬಹಿಷ್ಕಾರದ ಕರೆ ಇನ್ನೂ ಜಾರಿಯಲ್ಲಿದೆ ಎಂದು CWAB ಅಧ್ಯಕ್ಷ ಮಿಥುನ್ ಹೇಳಿದರು.
ಬಿಸಿಸಿಐ ಸೂಚನೆ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿರುವುದರಿಂದ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳಲ್ಲಿ ಸದ್ಯ ಉಂಟಾಗಿರುವ ಉದ್ವಿಗ್ನತೆಯನ್ನು ಪರಿಹರಿಸಲು ಮಾತುಕತೆ ನಡೆಸುವಂತೆ ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಕರೆ ನೀಡಿದ ನಂತರ, ನಜ್ಮುಲ್ ಹೊಸೈನ್ ಅವರನ್ನು 'ಭಾರತೀಯ ಏಜೆಂಟ್' ಎಂದು ಕರೆದರು.
ಮುಂಬರುವ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಅನಿಶ್ಚಿತತೆಯ ನಡುವೆ, ಮಾಜಿ ಪುರುಷರ ತಂಡದ ನಾಯಕ ತಮೀಮ್ ಇಕ್ಬಾಲ್, ಬಿಸಿಬಿ ದೇಶದ ಕ್ರಿಕೆಟ್ ಹಿತಾಸಕ್ತಿಗಳು ಮತ್ತು ಭವಿಷ್ಯವನ್ನು ಮುಂದಿಟ್ಟುಕೊಂಡು ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.