ನವದೆಹಲಿ: 2026ರ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಗಿನಿಂದ ಭಾರತ ಮತ್ತು ಶ್ರೀಲಂಕಾದ ಅತಿಥ್ಯದಲ್ಲಿ ನಡೆಯಲಿರುವ T20 ವಿಶ್ವಕಪ್‌ನಲ್ಲಿ ತಮ್ಮ ತಂಡದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ಬಿಸಿಸಿಐ ಮೌನ ಮುರಿದಿದೆ.
ಬಾಂಗ್ಲಾದೇಶದ ಟಿ 20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವ BCB ಬೇಡಿಕೆ ಮತ್ತು ಈ ವಿಷಯದ ಬಗ್ಗೆ ಐಸಿಸಿಯ ನಿಲುವು ಕುರಿತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಡುವಿನ ಯಾವುದೇ ಮಾತುಕತೆ ಬಗ್ಗೆ ನಮಗೆ ತಿಳಿದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಗುರುವಾರ ಹೇಳಿದ್ದಾರೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ ಭಾಗವಹಿಸುವ ಕುರಿತು ಚರ್ಚಿಸಲು ಮಂಗಳವಾರ ಮಧ್ಯಾಹ್ನ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡುವೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದಿದೆ. ಚರ್ಚೆ ವೇಳೆ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು BCB ಮನವಿ ಮಾಡಿದೆ ಎನ್ನಲಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ನಡುವಿನ ಯಾವುದೇ ಮಾತುಕತೆಗೆ ಸಂಬಂಧಿಸಿದಂತೆ ನಮಗೆ ಏನೂ ತಿಳಿದಿಲ್ಲ. ಮಾಹಿತಿ ದೊರೆತ ನಂತರ ಅದನ್ನು ತಿಳಿಸುತ್ತೇವೆ ಎಂದು ಸೈಕಿಯಾ ಸುದ್ದಿಸಂಸ್ಥೆ ANIಗೆ ತಿಳಿಸಿದ್ದಾರೆ. ಭದ್ರತೆ ಸೇರಿದಂತೆ 2026 ರ ICC ಪುರುಷರ T20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆಯ ಕುರಿತು ಇತ್ತೀಚಿನ ದಿನಗಳಲ್ಲಿ ಕೇಳಿಬಂದ ಟೀಕೆಗಳು ICC ಗೆ ತಿಳಿದಿದೆ ಎಂದು ಮೂಲಗಳು ತಿಳಿಸಿವೆ.
T20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಬಾಂಗ್ಲಾದೇಶವು ಫೆಬ್ರವರಿ 7 ರಂದು ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ತನ್ನ T20 ವಿಶ್ವಕಪ್ 2026 ಅಭಿಯಾನವನ್ನು ಪ್ರಾರಂಭಿಸಲಿದೆ. ವೆಸ್ಟ್ ಇಂಡೀಸ್ ನಂತರ ಫೆಬ್ರವರಿ 9 ರಂದು ಇಟಲಿ ಮತ್ತು ಇಂಗ್ಲೆಂಡ್ ಅನ್ನು ಎದುರಿಸಲಿದೆ, ಫೆಬ್ರವರಿ 17 ರಂದು ನೇಪಾಳ ವಿರುದ್ಧದ ಘರ್ಷಣೆಯೊಂದಿಗೆ ಲೀಗ್ ಹಂತದ ಹೋರಾಟವನ್ನು ಮುಕ್ತಾಯಗೊಳಿಸಲಿದೆ.