ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ಆಟಗಾರರು ಎರಡನೇ ಅವಕಾಶಗಳನ್ನು ಪಡೆಯುತ್ತಾರೆ. ಆದರೆ, ಆ ಅವಕಾಶವನ್ನು ಯಾರು ಹೇಗೆ ಬಳಸಿಕೊಂಡರು ಎಂಬುದು ಮುಖ್ಯವಾಗುತ್ತದೆ. ಬುಧವಾರ ರಾತ್ರಿ, ಟೀಂ ಇಂಡಿಯಾದ ಆಟಗಾರ್ತಿ ಹರ್ಲೀನ್ ಡಿಯೋಲ್ ಯುಪಿ ವಾರಿಯರ್ಜ್ ಪರ ಆಡುತ್ತಿದ್ದ ವೇಳೆ 47 ರನ್ ಗಳಿಸಿದ ಹೊರತಾಗಿಯೂ ರಿಟೈರ್ಡ್ ಹರ್ಟ್ ಆಗಿ ಹೊರನಡೆಯಬೇಕಾಯಿತು. ಗೊಂದಲದೊಂದಿಗೆ ಹರ್ಲೀನ್ ಡಿವೈ ಪಾಟೀಲ್ ಕ್ರೀಡಾಂಗಣದಿಂದ ಹೊರನಡೆದರು. ಈ ನಿರ್ಧಾರವನ್ನು 'ಡೆತ್-ಓವರ್‌ಗಳ ವೇಗವರ್ಧನೆ' ಹೆಸರಿನಲ್ಲಿ ತಂಡದ ಕೋಚ್ ತೆಗೆದುಕೊಂಡಿದ್ದರು. ಆದರೆ, ಅದಾದ ಇಪ್ಪತ್ನಾಲ್ಕು ಗಂಟೆಗಳಲ್ಲೇ ಹರ್ಲೀನ್, ಅದೇ ಮೈದಾನದಲ್ಲಿ ತಕ್ಕ ಉತ್ತರ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 64 ರನ್ ಗಳಿಸಿ ಯುಪಿ ವಾರಿಯರ್ಜ್ (ಯುಪಿಡಬ್ಲ್ಯು) ತಂಡವನ್ನು ಬಹುತೇಕ ಏಕಾಂಗಿಯಾಗಿ ಡಬ್ಲ್ಯುಪಿಎಲ್ 2026ನೇ ಆವೃತ್ತಿಯ ಮೊದಲ ಗೆಲುವಿಗೆ ಕರೆದೊಯ್ದರು. ಈ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಭೀತುಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ (MI) ನೀಡಿದ್ದ 162 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಯುಪಿ ವಾರಿಯರ್ಸ್ ತಂಡವು ನ್ಯಾಟ್ ಸಿವರ್-ಬ್ರಂಟ್ ಅವರ ಒಂದೇ ಓವರ್‌ನಲ್ಲಿ ಇಬ್ಬರೂ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಹರ್ಲೀನ್ ಡಿಯೋಲ್ ತಂಡದ ನೆರವಿಗೆ ಧಾವಿಸಿದರು. ಸಿವರ್-ಬ್ರಂಟ್ ಅವರ ಮೊದಲ ಎಸೆತದಲ್ಲಿಯೇ, ಬ್ಯಾಕ್‌ವರ್ಡ್ ಪಾಯಿಂಟ್ ಮೂಲಕ ಬೌಂಡರಿ ಬಾರಿಸಿದರು. ಮುಂದಿನ ಓವರ್‌ನಲ್ಲಿ, ಅವರು ಮುಂಬೈ ಇಂಡಿಯನ್ಸ್ ತಂಡದ ಟಾಪ್ ಬೌಲರ್ ಎಂದೇ ಹೆಸರಾಗಿರುವ ಅಮೆಲಿಯಾ ಕೆರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಹರ್ಲೀನ್ ಅವರ ಆಟದಲ್ಲಿ ಯಾವುದೇ ಹಿಂಜರಿಕೆ ಇರಲಿಲ್ಲ. ಹಿಂದಿನ ಪಂದ್ಯದಲ್ಲಿ 47 ರನ್ ಗಳಿಸಿದ ಹೊರತಾಗಿಯೂ ತನ್ನನ್ನು ಹೊರ ಕರೆಸಿಕೊಂಡಿದ್ದಕ್ಕೆ ತಕ್ಕ ಉತ್ತರ ನೀಡಿದರು. ಫೋಬೆ ಲಿಚ್‌ಫೀಲ್ಡ್ ಅವರ ವಿಕೆಟ್ ಬೀಳುವ ಹೊತ್ತಿಗೆ, ಡಿಯೋಲ್ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡಿದ್ದರು. ಬೌಲಿಂಗ್ ಬದಲಾವಣೆ ಮೂಲಕ ಮುಂಬೈ ಉತ್ತರ ಹುಡುಕುತ್ತಲೇ ಇದ್ದರೂ, ಹರ್ಲೀನ್ ಕೊನೆಗೂ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಅಂತಿಮ ಓವರ್‌ಗಳಲ್ಲಿ ಯುಪಿಡಬ್ಲ್ಯುಗೆ ಪುಶ್ ಅಗತ್ಯವಿದ್ದಾಗ, ಕೋಚ್ ಅಭಿಷೇಕ್ ನಾಯರ್ ತಮ್ಮ ಕೈಯನ್ನು ಮೇಲಕ್ಕೆತ್ತಿ 36 ಎಸೆತಗಳಲ್ಲಿ 47 ರನ್ ಗಳಿಸಿದ್ದ ಹರ್ಲೀನ್ ಅವರನ್ನು ರಿಟೈರ್ಡ್ ಹರ್ಟ್ ಆಗುವಂತೆ ಸೂಚಿಸಿದರು. ಆಗ ಹರ್ಲೀನ್ ನಾನಾ? ಎಂದು ಕೇಳಿದರು. ಬಳಿಕ ಗೊಂದಲದಲ್ಲಿಯೇ ಅವರು ಮೈದಾನದಿಂದ ಹೊರನಡೆದಿದ್ದರು. ಕೊನೆಯ ಮೂರು ಓವರ್‌ಗಳಲ್ಲಿ ಯುಪಿಡಬ್ಲ್ಯು ಕೇವಲ 13 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿದ್ದರಿಂದ ಕೋಚ್ ಯೋಜನೆ ಉಲ್ಟಾ ಹೊಡೆಯಿತು.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿನ್ನೆಯ ಪಂದ್ಯ ನನಗೆ ನಿಜಕ್ಕೂ ಆತ್ಮವಿಶ್ವಾಸವನ್ನು ನೀಡಿತು. ಏಕೆಂದರೆ ಮೊದಲ ಎರಡು ಪಂದ್ಯಗಳು ನಾನಂದುಕೊಂಡ ರೀತಿಯಲ್ಲಿ ನಡೆಯಲಿಲ್ಲ. ನಾನು ಮುಂದುವರೆದು ಕೆಲವು ವಿಷಯಗಳನ್ನು ಕಂಡುಕೊಂಡೆ, ನಾನು ಓವರ್‌ಹಿಟ್ ಮಾಡಲು ಪ್ರಯತ್ನಿಸುತ್ತಿದ್ದೆ. ಈ ವಿಕೆಟ್ ಓವರ್‌ಹಿಟ್‌ಗೆ ಪ್ರತಿಫಲ ನೀಡುವ ರೀತಿಯದ್ದಲ್ಲ, ಹೀಗಾಗಿ ಸ್ಕೋರಿಂಗ್‌ಗೆ ಹೆಚ್ಚಿನ ಸಮಯ ಬೇಕಾಗುತ್ತದೆ' ಎಂದು ಹರ್ಲೀನ್ ತಿಳಿಸಿದರು.
ಸಂಸ್ಕೃತಿ ಗುಪ್ತಾ ಅವರು ನೋ-ಬಾಲ್ ಎಸೆದಾಗ, ಫ್ರೀ ಹಿಟ್ ಅನ್ನು ಬಳಸಿಕೊಳ್ಳುವ ಮೂಲಕ ಹರ್ಲೀನ್ ತನ್ನ ಅರ್ಧಶತಕವನ್ನು ಪೂರ್ಣಗೊಲಿಸಿದರು ಮತ್ತು ನಂತರ ಅದೇ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಟ್ರಿಯಾನ್ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ಪಂದ್ಯವನ್ನು ಮುಗಿಸಿದರು.