ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಾಂಗ್ಲಾದೇಶ ತಂಡದ ಹಠಮಾರಿ ಧೋರಣೆಯಿಂದಾಗಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಢಾಕಾಗೆ ಬೆಂಬಲ ಸೂಚಿಸಿ ಪಾಕಿಸ್ತಾನ ಕ್ರಿಕೆಟ್ ತಂಡ ಇಡೀ ಟೂರ್ನಿಯನ್ನೇ ಬಹಿಷ್ಕರಿಸುವ ಬೆದರಿಕೆ ಹಾಕಿದೆ.
ಹೌದು.. ಬಾಂಗ್ಲಾದೇಶವನ್ನು ಬೆಂಬಲಿಸಲು ಪಾಕಿಸ್ತಾನ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಭಾರತದಿಂದ ತಮ್ಮ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಬಾಂಗ್ಲಾದೇಶದಲ್ಲಿರುವ ಬಿಕ್ಕಟ್ಟು ಬಗೆಹರಿಯದಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತಮ್ಮ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವುದರಿಂದ, ರಾಜತಾಂತ್ರಿಕ ಸಹಾಯವನ್ನು ಕೋರಿ ಪಿಸಿಬಿಯನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.
"ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಬೆಂಬಲ ಪಡೆಯಲು ಬಾಂಗ್ಲಾದೇಶ ಸರ್ಕಾರ ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿತು ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು" ಎಂದು ಮೂಲವೊಂದು ತಿಳಿಸಿದೆ.
"ಬಾಂಗ್ಲಾದೇಶದ ಸಮಸ್ಯೆಯನ್ನು ಬಗೆಹರಿಸದಿದ್ದರೆ ಅವರು ತಮ್ಮ ತಂಡದ ಪಾಲ್ಗೊಳ್ಳುವಿಕೆಯನ್ನು ಮರುಪರಿಶೀಲಿಸಬಹುದು ಎಂದು ಪಾಕಿಸ್ತಾನ ನಮಗೆ ಸೂಚಿಸಿದೆ. ಭಾರತದಲ್ಲಿ ಆಡುವ ಬದಲು ಶ್ರೀಲಂಕಾದಲ್ಲಿ ಆಡಲು T20 ವಿಶ್ವಕಪ್ ಸಮಯದಲ್ಲಿ ಗ್ರೂಪ್ ಸಿಯಲ್ಲಿ ಐರ್ಲೆಂಡ್‌ನೊಂದಿಗೆ ತನ್ನ ಪಂದ್ಯಗಳನ್ನು ಬದಲಾಯಿಸಿಕೊಳ್ಳುವಂತೆ ಬಿಸಿಬಿ ಶನಿವಾರ ಐಸಿಸಿಯನ್ನು ಕೇಳಿಕೊಂಡಿದೆ ಎನ್ನಲಾಗಿದೆ.
"2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಭಾಗವಹಿಸುವಿಕೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ" ಎಂದು ಐಸಿಸಿ ಪ್ರತಿನಿಧಿಗಳೊಂದಿಗಿನ ಸಭೆಯ ನಂತರ ಬಿಸಿಬಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶಕ್ಕೆ ಐಸಿಸಿ ಗಡುವು
ಇನ್ನು ಬಾಂಗ್ಲಾದೇಶವು ಪ್ರಸ್ತುತ ವೆಸ್ಟ್ ಇಂಡೀಸ್, ಇಟಲಿ, ಇಂಗ್ಲೆಂಡ್ ಮತ್ತು ನೇಪಾಳದೊಂದಿಗೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆ ತಂಡದ ಪಂದ್ಯಗಳು ನಿಯೋಜನೆಯಾಗಿವೆ. ಏತನ್ಮಧ್ಯೆ, ಜನವರಿ 21 ರೊಳಗೆ ಟಿ 20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ನೀಡುವಂತೆ ಐಸಿಸಿ ಬಿಸಿಬಿಗೆ ಅಂತಿಮ ಗಡುವು ನೀಡಿದೆ ಎಂದು ವರದಿಯೊಂದು ತಿಳಿಸಿದೆ.
ಬಿಸಿಬಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿದರೆ, ಐಸಿಸಿ ಬದಲಿ ಆಟಗಾರನನ್ನು ಹೆಸರಿಸುವ ಸಾಧ್ಯತೆಯಿದೆ ಮತ್ತು ಪ್ರಸ್ತುತ ಶ್ರೇಯಾಂಕದ ಪ್ರಕಾರ ಅದು ಸ್ಕಾಟ್ಲೆಂಡ್ ಆಗಿರಬಹುದು. ಅಂತೆಯೇ ಐಸಿಸಿ ಮೂಲ ವೇಳಾಪಟ್ಟಿಯನ್ನು ಬದಲಾಯಿಸದಿರಲು ದೃಢವಾಗಿ ನಿಂತಿದೆ, ಬಾಂಗ್ಲಾದೇಶ ತಂಡವು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಮೂರು ಗುಂಪು ಹಂತದ ಪಂದ್ಯಗಳನ್ನು ಆಡಲಿದ್ದು, ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲಿದೆ.