ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಆಯೋಜಿಸಲು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಿಂದೇಟು ಹಾಕುತ್ತಿದೆ ಎಂಬ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಹೇಳಿಕೆಗಳಿಗೆ ಆರ್‌ಸಿಬಿ ಪ್ರತಿಕ್ರಿಯಿಸಿದೆ. ಕಳೆದ ವರ್ಷ RCB ಚೊಚ್ಚಲ ಪ್ರಶಸ್ತಿ ಗೆದ್ದ ಬಳಿಕ ನಡೆದ ವಿಜಯೋತ್ಸವದ ವೇಳೆ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ನಂತರ, ಅಂತರರಾಷ್ಟ್ರೀಯ ಮತ್ತು IPL ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಷರತ್ತುಬದ್ಧ ಗ್ರೀನ್ ಸಿಗ್ನಲ್ ನೀಡಿದೆ.
RCB ತಮ್ಮ ತವರು ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಇದರಿಂದಾಗಿ ಬಿಸಿಸಿಐನಿಂದ ಬೇಷರತ್ತಾದ ಅನುಮತಿ ಪಡೆಯಲು ಕೆಎಸ್‌ಸಿಎಗೆ ಸಾಧ್ಯವಾಗುತ್ತದೆ ಎಂದು ಬುಧವಾರ ವೆಂಕಟೇಶ್ ಪ್ರಸಾದ್ ಹೇಳಿದರು.
ಆದಾಗ್ಯೂ, RCB ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ತವರಿನ ಪ್ರೇಕ್ಷಕರ ಮುಂದೆಯೇ ಐಪಿಎಲ್ ಪಂದ್ಯಗಳನ್ನು ಆಡಲು ಬಯಸುತ್ತಿದ್ದರೂ, ಅಭಿಮಾನಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇನ್ನೂ ಕೆಲವು 'ಗ್ರೇ ಏರಿಯಾಗಳು' ಇವೆ ಎಂದು ಫ್ರಾಂಚೈಸಿ ಭಾವಿಸುತ್ತದೆ ಎಂದಿದೆ.
'ಪ್ರಸಿದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಈ ಷರತ್ತುಬದ್ಧ ಅನುಮೋದನೆಗೆ ಕಾರಣವಾದ ಮೂಲಸೌಕರ್ಯ ಒದಗಿಸುವಲ್ಲಿ KSCAಯ ಪ್ರಯತ್ನಗಳನ್ನು ನಾವು ಹೆಚ್ಚು ಪ್ರಶಂಸಿಸುತ್ತೇವೆ' ಎಂದು RCB ಹೇಳಿಕೆಯಲ್ಲಿ ತಿಳಿಸಿದೆ.
'ನಮ್ಮ ಉತ್ಸಾಹಿ ಅಭಿಮಾನಿಗಳ ಮುಂದೆ ತವರು ಮೈದಾನದಲ್ಲಿ ಯಾವಾಗಲೂ ಆಡುವುದು ನಮ್ಮ ಬಯಕೆಯಾಗಿದೆ. ಇಲ್ಲಿ ಪಂದ್ಯಗಳನ್ನು ಆಯೋಜಿಸಲು ಅನ್ವಯಿಸುವ ಷರತ್ತುಗಳು ಮತ್ತು ಅಭಿಮಾನಿಗಳ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಎಲ್ಲ ಪಾಲುದಾರರು ಹೇಗೆ ಉತ್ತಮವಾಗಿ ಕೆಲಸ ಮಾಡಬಹುದು ಎಂಬುದನ್ನು ನಿರ್ಧರಿಸುವುದು ನಮ್ಮ ಗುರಿಯಾಗಿದೆ' ಎಂದಿದೆ.
ಕಳೆದ ವರ್ಷ ಜೂನ್ 4 ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವಿಗೀಡಾದ ನಂತರ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ.
'ಅಭಿಮಾನಿಗಳು RCB ಯ ಹೃದಯ ಮತ್ತು ಆತ್ಮ ಎಂದು ನಾವು ಪದೇ ಪದೆ ಹೇಳಿದ್ದೇವೆ. ನಮಗೆ ನಮ್ಮ ಅಭಿಮಾನಿಗಳು ಮೊದಲು. ಹೀಗಾಗಿ, ಅವರಿಗೆ ಸಾಧ್ಯವಾದಷ್ಟು ಉತ್ತಮ ಮತ್ತು ಸುರಕ್ಷಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ನಮ್ಮ ಪ್ರಾಥಮಿಕ ಸಂಭಾಷಣೆಗಳಿಂದ, ಕೆಲವು ಗ್ರೇ ಏರಿಯಾಗಳನ್ನು ಪರಿಹರಿಸಬೇಕಾಗಿದೆ; ತಂಡ ಮತ್ತು ನಮ್ಮ ಅಭಿಮಾನಿಗಳಿಗೆ ಜವಾಬ್ದಾರಿಯುತ ನಿರ್ಧಾರಕ್ಕೆ ಬರುವ ಮೊದಲು ನಾವು ಈ ಪ್ಯಾರಾಮೀಟರ್‌ಗಳು ಮತ್ತು ಇನ್‌ಪುಟ್‌ಗಳನ್ನು ಪರಿಗಣಿಸುತ್ತಿದ್ದೇವೆ' ಎಂದು ಹೇಳಿದೆ.