ನಾಗ್ಪುರದಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ವೇಳೆ ಟೀಂ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ಭಾರಿ ಗಾಯದ ಭೀತಿಗೆ ಒಳಗಾಗಿದ್ದರು. ತಮ್ಮದೇ ಬೌಲಿಂಗ್‌ನಲ್ಲಿ ಡೆರಿಲ್ ಮಿಚೆಲ್ ಅವರ ಹೊಡೆತವನ್ನು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಎಡಗೈಯಿಂದ ಚೆಂಡನ್ನು ಹಿಡಿಯಲು ಪ್ರಯತ್ನಿಸಿದಾಗ ಅಕ್ಷರ್ ಅವರ ತೋರು ಬೆರಳಿನ ತುದಿಗೆ ಚೆಂಡು ತಗುಲಿದೆ. ಅದಾದ ಸ್ವಲ್ಪ ಸಮಯದ ನಂತರ ಅವರು ಮೈದಾನವನ್ನು ತೊರೆದಿದ್ದಾರೆ.
ಅಕ್ಷರ್ ಪಟೇಲ್ ಅವರ ಬೆರಳಿನಿಂದ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಮೈದಾನದಿಂದ ಹೊರನಡೆದರು ಮತ್ತು ಅವರ ಬದಲಿಗೆ ರವಿ ಬಿಷ್ಣೋಯ್ ತಂಡ ಸೇರಿದರು. ಆ ಓವರ್‌ನ ಉಳಿದ ಮೂರು ಎಸೆತಗಳನ್ನು ಅಭಿಷೇಕ್ ಶರ್ಮಾ ಬೌಲಿಂಗ್ ಮಾಡಿದರು. 2026ರ T20 ವಿಶ್ವಕಪ್‌ಗೆ ಉಪನಾಯಕನಾಗಿ ನೇಮಕಗೊಂಡಿರುವ ಅಕ್ಷರ್ ಪಟೇಲ್ ಅವರಿಗೆ ಗಾಯವಾಗಿರುವುದು ಇದೀಗ ತಂಡಕ್ಕೆ ಪ್ರಮುಖ ತಲೆನೋವಾಗಿ ಪರಿಣಮಿಸಿದೆ. ಆಲ್‌ರೌಂಡರ್‌ನ ಗಾಯದ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿಯನ್ನು BCCI ಸದ್ಯಕ್ಕೆ ಒದಗಿಸಿಲ್ಲ.
ನಾಗ್ಪುರದ VCA ಸ್ಟೇಡಿಯಂನಲ್ಲಿ ನಡೆದ T20I ಸರಣಿಯ ಆರಂಭಿಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಅಮೋಘ 84, ರಿಂಕು ಸಿಂಗ್ ಅವರ ಅಜೇಯ 44 ಮತ್ತು ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ಅವರ ಭರ್ಜರಿ ಬೌಲಿಂಗ್ ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 48 ರನ್‌ಗಳ ಜಯ ಸಾಧಿಸಿತು.
ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಐದು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳೊಂದಿಗೆ 240ರ ಸ್ಟ್ರೈಕ್ ರೇಟ್‌ನಲ್ಲಿ ಮತ್ತೊಂದು ಅದ್ಭುತ ನಾಕ್ ಮಾಡಿದರು. ರಿಂಕು 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 44 ರನ್‌ಗಳೊಂದಿಗೆ ಬಲವಾಗಿ ಇನಿಂಗ್ಸ್ ಮುಗಿಸಿದರು.
ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರು 32 ಮತ್ತು 25 ರನ್‌ಗಳನ್ನು ಕಲೆಹಾಕಿದರು. ನ್ಯೂಜಿಲೆಂಡ್ 15 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿತು. ಭಾರತ ನೀಡಿದ 239 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 52/3ಕ್ಕೆ ಕುಸಿಯಿತು. ಗ್ಲೆನ್ ಫಿಲಿಪ್ಸ್ 40 ಎಸೆತಗಳಲ್ಲಿ 4 ಬೌಂಡರಿಗಳು ಮತ್ತು ಆರು ಸಿಕ್ಸರ್ ಮೂಲಕ 78 ರನ್ ಗಳಿಸಿ ತಂಡಕ್ಕೆ ನೆರವಾದರು.
ಅಂತಿಮವಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಕೇವಲ 190 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ 40 ರನ್‌ಗಳ ಜಯ ಸಾಧಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ವರುಣ್ ಚಕ್ರವರ್ತಿ ಮತ್ತು ದುಬೆ ಹೊರತಾಗಿ, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದರೂ, ಲಯ ಕಡಿಮೆಯಿತ್ತು.