ಮುಂಬೈ: ಮುಂಬರುವ 2026 ರ ಟಿ 20 ವಿಶ್ವಕಪ್‌ಗಾಗಿ ಭಾರತಕ್ಕೆ ಬರಲು ಬಾಂಗ್ಲಾದೇಶ ನಿರಾಕರಿಸಿದರೆ, ಅದರ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಐಸಿಸಿ ಮೂಲಗಳು ಶುಕ್ರವಾರ ತಿಳಿಸಿವೆ.
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಈ ವಿಷಯದ ಕುರಿತು ಅಂತಿಮ ನಿರ್ಧಾರಕ್ಕಾಗಿ ದುಬೈನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಿ 20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ ಬಳಿಕ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್‌ಗೆ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಘೋಷಿಸಿದೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸಲು ಬಾಂಗ್ಲಾದೇಶ ನಿರಾಕರಿಸಿದೆ.
ಬಾಂಗ್ಲಾದೇಶಕ್ಕೆ ಐಸಿಸಿ ಅಂತಿಮ ಎಚ್ಚರಿಕೆ
ಭಾರತಕ್ಕೆ ಪ್ರಯಾಣಿಸಲು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಬದಲಿ ತಂಡವನ್ನು ಆಡಿಸಲಾಗುವುದು ಎಂದು ಐಸಿಸಿ ಬುಧವಾರ ಬಾಂಗ್ಲಾದೇಶಕ್ಕೆ ಅಂತಿಮ ಎಚ್ಚರಿಕೆ ನೀಡಿತ್ತು.
ಭಾರತದಲ್ಲಿ ಬಾಂಗ್ಲಾದೇಶ ಆಟಗಾರರು, ಅಧಿಕಾರಿಗಳು ಅಥವಾ ಅಭಿಮಾನಿಗಳ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ತಿಳಿಸಿರುವ ಐಸಿಸಿ, ಇದಕ್ಕೆ ಪ್ರತಿಕ್ರಿಯಿಸಲು ಗುರುವಾರದ ತನಕ ಬಾಂಗ್ಲಾದೇಶಕ್ಕೆ ಸಮಯ ನೀಡಿತ್ತು.
ನಮ್ಮ ಕ್ರಿಕೆಟಿಗರು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಭಾರತದಲ್ಲಿ ಆಡುವ ಬಗ್ಗೆ ಭದ್ರತಾ ಅಪಾಯಗಳ ಕುರಿತು ನಮ್ಮ ಆತಂಕ ನಿವಾರಣೆಯಾಗಿಲ್ಲ. ನಮ್ಮ ಇಡೀ ಇಡೀ ತಂಡ, ಪತ್ರಕರ್ತರು ಹಾಗೂ ಪ್ರೇಕ್ಷಕರ ಸುರಕ್ಷತೆ ಕುರಿತು ನಮಗೆ ಸಂಪೂರ್ಣ ಭರವಸೆ ಇಲ್ಲ. ನಾವು ವಿಶ್ವಾಸವನ್ನು ಕಳೆದುಕೊಂಡಿಲ್ಲ; ನಮ್ಮ ತಂಡ ಸಿದ್ಧವಾಗಿದೆ,” ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದಾರೆ.