ಗುವಾಹಟಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 154 ರನ್‌ಗಳ ಗುರಿಯನ್ನು ಭಾರತ ಕೇವಲ 10 ಓವರ್‌ಗಳಲ್ಲಿ ಬಾರಿಸಿದೆ. ಭಾರತ 2 ವಿಕೆಟ್‌ಗಳ ನಷ್ಟಕ್ಕೆ 155 ರನ್ ಬಾರಿಸುವ ಮೂಲಕ ಗುರಿ ತಲುಪಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿ ಕೈವಶ ಮಾಡಿಕೊಂಡಿದೆ.
ಬರ್ಸಪಾರ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 153 ರನ್ ಗಳಿಸಿತ್ತು. ಕಿವೀಸ್ ಪರ ಗ್ಲೇನ್ ಪಿಲಿಪ್ಸ್ 48, ಮಾರ್ಕ್ ಚಪ್ಮನ್ 32, ಮಿಚೆಲ್ ಸ್ಯಾಂಟ್ನರ್ 27 ರನ್ ಗಳಿಸಿದ್ದಾರೆ. ಭಾರತದ ಪರ ಜಸ್ ಪ್ರೀತ್ ಬುಮ್ರಾ 3, ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರೇ ಹರ್ಷಿತ್ ರಾಣಾ 1 ವಿಕೆಟ್ ಪಡೆದರು.
ಭಾರತದ ಪರ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಜೇಯ ಆಟ ಮುಂದುವರೆಸಿದ ಅಭಿಷೇಕ್ 68 ರನ್ ಗಳಿಸಿದರೆ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 57 ರನ್ ಬಾರಿಸಿದರು. ಇಶಾನ್ ಕಿಶನ್ 28 ರನ್ ಗಳಿಸಿದರು. ಮೂರನೇ ಟಿ20ಐ ಗೆಲ್ಲುವ ಮೂಲಕ, ಭಾರತ 5 ಪಂದ್ಯಗಳ ಸರಣಿಯಲ್ಲಿ ಅಜೇಯ 3-0 ಮುನ್ನಡೆ ಸಾಧಿಸಿತು. ಇದರೊಂದಿಗೆ, ಟೀಮ್ ಇಂಡಿಯಾ ಸತತ 12ನೇ ಟಿ20ಐ ಸರಣಿಯನ್ನು ಗೆದ್ದುಕೊಂಡಿತು. ಭಾರತ ಮೊದಲ ಪಂದ್ಯವನ್ನು 48 ರನ್‌ಗಳಿಂದ ಮತ್ತು ಎರಡನೇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ನಾಲ್ಕನೇ ಪಂದ್ಯ ಜನವರಿ 28ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.