ಬರ್ಸಾಪರಾ: ಭಾನುವಾರ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು.
ಬಿರುಸಿನಿಂದ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಐದು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ ಬಾರಿಸುವುದರೊಂದಿಗೆ ಈ ಹಿಂದೆ T20Iಯಲ್ಲಿ ಭಾರತದ ಪರ 16 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ಆದರೆ 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಯುವರಾಜ್ ಸಿಂಗ್ 12 ಎಸೆತಗಳ ಅರ್ಧ ಶತಕದ ದಾಖಲೆ ಮುರಿಯುವಲ್ಲಿ ವಿಫಲರಾದರು.
ನ್ಯೂಜಿಲೆಂಡ್ ನೀಡಿದ 154 ರನ್ ಗಳ ಗುರಿ ಬೆನ್ನಟ್ಟಿದ್ದ ಪವರ್ ಪ್ಲೇನಲ್ಲಿ 94 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 25 ವರ್ಷದ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ 68 ರನ್ ಗಳಿಸುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯ ಮುಗಿದ ಬಳಿಕ ಈ ಕುರಿತು ಮಾತನಾಡಿದ ಅಭಿಷೇಕ್ ಶರ್ಮಾ, ನನ್ನ ತಂಡವು ನನ್ನಿಂದ ಇದನ್ನೇ ಬಯಸುತ್ತದೆ. ಯಾವಾಗಲೂ ಅದೇ ರೀತಿಯಲ್ಲಿ ಆಡಲು ಬಯಸುತ್ತೇವೆ. ಆದರೆ ನಿಸ್ಸಂಶಯವಾಗಿ ಪ್ರತಿ ಬಾರಿಯೂ ಇದನ್ನು ಮಾಡುವುದು ಸುಲಭವಲ್ಲ. ಇದು ಮಾನಸಿಕ ಮತ್ತು ಡ್ರೆಸ್ಸಿಂಗ್ ರೂಮ್ ಸುತ್ತಲೂ ಇರುವ ವಾತಾವರಣಕ್ಕೆ ಸಂಬಂಧಿಸಿದೆ ಅಂತಾ ಭಾವಿಸುತ್ತೇನೆ. ಈ ಸರಣಿಯಲ್ಲಿ ಎಲ್ಲರೂ ಚೆನ್ನಾಗಿ ಆಡುತ್ತಿದ್ದು ಯಾರಾದರೂ ಯುವರಾಜ್ ಸಿಂಗ್ ದಾಖಲೆ ಮುರಿಯಬಹುದು ಎಂದರು.