ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭದಿಂದಲೂ ರನ್ ಗಳಿಸಲು ಹೆಣಗಾಡುತ್ತಿದ್ದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಸತತ ಮೂರು ಬಾರಿ ಡಕ್ ಔಟ್ ಆದ ನಂತರ ಅಭಿಷೇಕ್ ಆರಂಭದಲ್ಲಿ ರನ್ ಗಳಿಸುತ್ತಿದ್ದರಾದರೂ ಅದನ್ನು ದೊಡ್ಡ ಇನಿಂಗ್ಸ್ ಆಗಿ ಬದಲಿಸಲು ಆಗದೆ ವಿಕೆಟ್ ಒಪ್ಪಿಸುತ್ತಿದ್ದರು. ಇದು ಟೀಂ ಇಂಡಿಯಾಗೆ ಕಳವಳಕಾರಿ ವಿಚಾರವಾಗಿತ್ತು. ಬಹುತೇಕರು ಅಭಿಷೇಕ್ ಅವರಿಗೆ ವಿಶ್ರಾಂತಿ ನೀಡಬೇಕು ಎಂದೇ ಹೇಳುತ್ತಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭಿಷೇಕ್ ತನ್ನ ಸುತ್ತ ಎದ್ದಿದ್ದ ಎಲ್ಲ ಮಾತುಗಳಿಗೆ ತೆರೆ ಎಳೆದರು.
ಸುಮಾರು ಒಂದು ಲಕ್ಷ ಅಭಿಮಾನಿಗಳ ಎದುರು ಅಭಿಷೇಕ್ ಶರ್ಮಾ ಕೇವಲ 21 ಎಸೆತಗಳಲ್ಲಿ 52 ರನ್ ಗಳಿಸಿದರು. ಕೇವಲ 18 ಎಸೆತಗಳಲ್ಲಿಯೇ ಅರ್ಧಶತಕ ತಲುಪಿದರು. ಸಂಜು ಸ್ಯಾಮ್ಸನ್ ಜೊತೆಗೆ ಭಾರತವು ಅಬ್ಬರದ ಆರಂಭ ಪಡೆಯಲು ಸಹಾಯ ಮಾಡಿದರು. ಪವರ್‌ಪ್ಲೇಯಲ್ಲಿ ಅವರ 96 ರನ್‌ಗಳ ಆರಂಭಿಕ ಜೊತೆಯಾಟ ಟಿ20 ವಿಶ್ವಕಪ್ ಇತಿಹಾಸದಲ್ಲಿ ಜಂಟಿ ಅತ್ಯಧಿಕ ಪವರ್‌ಪ್ಲೇ ಮೊತ್ತವಾಯಿತು.
ಕುತೂಹಲಕಾರಿ ವಿಚಾರವೆಂದರೆ, ಅಭಿಷೇಕ್ ಶರ್ಮಾ ಈ ಇನಿಂಗ್ಸ್‌ನಲ್ಲಿ ಬಳಸಿದ ಬ್ಯಾಟ್ ಅವರದ್ದಾಗಿರಲಿಲ್ಲ.
ಪಂದ್ಯದ ನಂತರ ಮಾತನಾಡಿದ ಅಭಿಷೇಕ್, ಫೈನಲ್ ಪಂದ್ಯದಂದು ಶಿವಂ ದುಬೆ ಅವರ ಬ್ಯಾಟ್ ಅನ್ನು ಕೈಗೆತ್ತಿಕೊಂಡಿದ್ದಾಗಿ ಬಹಿರಂಗಪಡಿಸಿದರು. ಶರ್ಮಾ ಅವರ 18 ಎಸೆತಗಳ ಅರ್ಧಶತಕವು ಈಗ ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಅರ್ಧಶತಕವಾಗಿದೆ. 2022ರಲ್ಲಿ ಯುವರಾಜ್ ಸಿಂಗ್ ಅವರ 12 ಎಸೆತಗಳ ಬ್ಲಿಟ್ಜ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ 17 ಎಸೆತಗಳ ಪ್ರಯತ್ನದ ನಂತರ ಅಭಿಷೇಕ್ ಶರ್ಮಾ ಸ್ಥಾನ ಪಡೆದಿದ್ದಾರೆ.
'ಇಂದು ನಾನು ಶಿವಂ ದುಬೆ ಅವರ ಬ್ಯಾಟ್‌ನಿಂದ ಬ್ಯಾಟಿಂಗ್ ಮಾಡಿದ್ದೇನೆ. ಆದ್ದರಿಂದ, ದುಬೆ ಅವರಿಗೆ ಧನ್ಯವಾದಗಳು. ಬೆಳಗ್ಗೆ ನನಗೆ ಬೇರೆಯದೇನೋ ಪ್ರಯತ್ನಿಸಬೇಕೆಂದು ಅನಿಸಿತು. ಶುಭಮನ್ ಗಿಲ್ ಸುತ್ತಮುತ್ತ ಇರಲಿಲ್ಲ, ಹಾಗಾಗಿ ನಾನು ದುಬೆ ಬಳಿಗೆ ನಡೆದು ಅವರ ಬ್ಯಾಟ್ ಎತ್ತಿಕೊಂಡೆ' ಎಂದು ಅಭಿಷೇಕ್ ಹೇಳಿದರು. "
ವಿಶ್ವಕಪ್‌ಗೆ ಮುಂಚಿನ ಕೊನೆಯ ಸರಣಿಯವರೆಗೆ ಭಾರತದ T20I ಉಪನಾಯಕನಾಗಿದ್ದ ಗಿಲ್, ದೀರ್ಘಕಾಲದವರೆಗೆ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ತಂಡದಿಂದ ಹೊರಗುಳಿದಿದ್ದರು. ಇದರಿಂದಾಗಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್‌ರಂತಹ ಆಟಗಾರರಿಗೆ ಅವಕಾಶ ಸಿಕ್ಕಿತು. ಇಬ್ಬರೂ ಪಂದ್ಯಾವಳಿಯಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡರು.
ಫೈನಲ್ ಪಂದ್ಯದಲ್ಲಿ ಅಭಿಷೇಕ್ ಆರಂಭದಲ್ಲಿ ತಾಳ್ಮೆಯ ಆಟವಾಡಿದರು. ಗ್ಲೆನ್ ಫಿಲಿಪ್ಸ್ ವಿರುದ್ಧ ಅವರ ಮೊದಲ ಎಸೆತ ಶಾಂತವಾದ ಫಾರ್ವರ್ಡ್ ಡಿಫೆನ್ಸ್ ಆಗಿತ್ತು. ಪಿಚ್‌ನೊಂದಿಗೆ ಅವರು ಕಂಫರ್ಟ್ ಆದ ಬಳಿಕವೇ, ರನ‌್ ಮಳೆ ಸುರಿಸಿದರು.
ಟೂರ್ನಮೆಂಟ್‌ನಲ್ಲಿ ತನ್ನ ಕಷ್ಟದ ಓಟವನ್ನು ನೆನಪಿಸಿಕೊಳ್ಳುತ್ತಾ ಅಭಿಷೇಕ್, 'ಸುಮಾರು ಒಂದೂವರೆ ವರ್ಷ ಕನಸಿನ ಓಟವನ್ನು ಕಂಡ ನಂತರ ಕಳೆದ ಒಂದು ತಿಂಗಳಿನಿಂದ ನಾನು ಈ ಕೆಟ್ಟ ಹಂತವನ್ನು ಎದುರಿಸುತ್ತಿದ್ದೇನೆ. ಅಂತಹ ಸಂದರ್ಭಗಳಲ್ಲಿ ಒಂದು ವಿಷಯ ಬಹಳ ಮುಖ್ಯ - ನೀವು ಇಟ್ಟುಕೊಳ್ಳುವ ಸಹವಾಸ. ನಿಮ್ಮ ಸುತ್ತಲಿನ ಜನರು ನೀವು ಉತ್ತಮವಾಗಲು ಸಹಾಯ ಮಾಡಲು ಬಯಸಿದರೆ, ಅದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ನಾನು ಬ್ಯಾಟಿಂಗ್‌ನೊಂದಿಗೆ ಕೊಡುಗೆ ನೀಡದಿದ್ದಾಗ, ತಂಡದಲ್ಲಿರುವ ಎಲ್ಲರೂ ಇನ್ನೂ ನನ್ನಲ್ಲಿ ನಂಬಿಕೆ ಇಟ್ಟಿದ್ದರು. ಅವರು 'ನನ್ನಿಂದ ಸಾಧ್ಯ' ಎಂದು ಹೇಳುತ್ತಲೇ ಇದ್ದರು' ಎಂದರು.