ನವದೆಹಲಿ: ಅಯೋಧ್ಯಾ ಪ್ರೀಮಿಯರ್ ಲೀಗ್ ನಲ್ಲಿ ಭಾರತದ ಉದಯೋನ್ಮುಖ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್ ಸೋಲ್ಡ್ ಬ್ಯಾಟರ್ ಬ್ಯಾಟರ್ ಸ್ವಸ್ತಿಕ್ ಚಿಕಾರ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಆರ್ ಸಿಬಿಯ ಮಾಜಿ ಆಟಗಾರ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿ ಸ್ವಸ್ತಿಕ್ ಚಿಕಾರ ಮತ್ತೊಮ್ಮೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಆಯ್ಕೆದಾರರ ಗಮನ ಸೆಳೆದಿದ್ದಾರೆ.
ಅಯೋಧ್ಯಾ ಪ್ರೀಮಿಯರ್ ಲೀಗ್ ನಲ್ಲಿ ಗೋಮ್ಟಿ ಥಂಡರ್ ಪರ ಆಡುತ್ತಿರುವ ಸ್ವಸ್ತಿಕ್ ಚಿಕಾರ ಹಿಂಡನ್ ಟೈಟಾನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಗೋಮ್ಟಿ ಥಂಡರ್ ಪರ ಆಡುತ್ತಿದ್ದ ಸ್ವಸ್ತಿಕ್ ಆರಂಭಿಕನಾಗಿ ಕಣಕ್ಕಿಳಿದ ಸ್ವಸ್ತಿಕ್ ಚಿಕಾರ ಕೇವಲ 69 ಎಸೆತಗಳಲ್ಲಿ ಅಜೇಯ 195 ರನ್ ಗಳಿಸಿದರು. ಆ ಮೂಲಕ ಕೇವಲ 5ರನ್ ಗಳ ಅಂತರದಲ್ಲಿ ದಾಖಲೆಯ ದ್ವಿಶತಕ ಮಿಸ್ ಮಾಡಿಕೊಂಡರು.
ಅವರ ಈ ಸ್ಫೋಟಕ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 21 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳು ಸೇರಿದ್ದವು. ಸ್ವಸ್ತಿಕ್ ಬರೊಬ್ಬರಿ 282.61 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು.
ಸ್ವಸ್ತಿಕ್ ತಮ್ಮ ಈ ಅಮೋಘ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು.
ವಿಕೆಟ್ ನಷ್ಟವಿಲ್ಲದೇ 300 ರನ್
ಇನ್ನು ಈ ಪಂದ್ಯದಲ್ಲಿ ಗೋಮ್ಟಿ ಥಂಡರ್ ತಂಡ ಸ್ವಸ್ತಿಕ್ ಚಿಕಾರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಕೆಟ್ ನಷ್ಟವಿಲ್ಲದೇ ಬರೊಬ್ಬರಿ 300 ರನ್ ಕಲೆಹಾಕಿತು. ಆ ಮೂಲಕ ದೇಶೀ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಯಿತು. ಮಾತ್ರವಲ್ಲದೇ ಗೋಮ್ಟಿ ಥಂಡರ್ 20 ಓವರ್‌ಗಳಲ್ಲಿ 307 ರನ್ ಗಳಿಸಿತು.
ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರ
ಇನ್ನೂ ಅಚ್ಚರಿ ಎಂದರೆ ಸ್ವಸ್ತಿಕ್ ಚಿಕಾರ ಈಗಾಗಲೇ ಐಪಿಎಲ್ ಆಟಗಾರರ ಪಟ್ಟಿಯಲ್ಲಿದ್ದರು. ಅವರು 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದರು ಮತ್ತು ನಂತರ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು.
ಆದರೆ ಎರಡು ತಂಡಗಳಲ್ಲಿದ್ದರೂ, ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಆಡಲು ಅವಕಾಶ ಸಿಗಲಿಲ್ಲ. ಐಪಿಎಲ್ 2026 ಕ್ಕಿಂತ ಮೊದಲು, ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿತು. ಅವರು 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಪ್ರವೇಶಿಸಿದರಾದರೂ ಅವರನ್ನು ಹರಾಜಿನಲ್ಲಿ ಯಾವುದೇ ತಂಡ ಖರೀದಿ ಮಾಡಲಿಲ್ಲ. ಹೀಗಾಗಿ ಸ್ವಸ್ತಿಕ್ ಮಾರಾಟವಾಗದೇ ಉಳಿದರು.