ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದಕ್ಕೆ ಕೋಮುಬಣ್ಣ: ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಹತ್ವದ ಹೇಳಿಕೆ!
ವೇಗದ ಬೌಲರ್ ಮೊಹಮ್ಮದ್ ಸಿರಾಜ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ (playing XI) ಸೇರಿಸಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ದೇಶಕ್ಕಾಗಿ ಸಿರಾಜ್ ನೀಡಿರುವ ಪ್ರದರ್ಶನವನ್ನು ಅವರು ಶ್ಲಾಘಿಸಿದ್ದಾರೆ.
ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಿಂದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ವೇಗದ ಬೌಲರ್ ಮೊಹಮ್ಮದ್ ಸಿರಾಜ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ (playing XI) ಸೇರಿಸಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ದೇಶಕ್ಕಾಗಿ ಸಿರಾಜ್ ನೀಡಿರುವ ಪ್ರದರ್ಶನವನ್ನು ಅವರು ಶ್ಲಾಘಿಸಿದ್ದಾರೆ.
ಹೆಸರಿನ ಕಾರಣದಿಂದಾಗಿ ಸಿರಾಜ್ ಅವರನ್ನು ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಂಡಿಲ್ಲ. ಮುಸ್ಲಿಂ ಅನ್ನೋ ಕಾರಣದಿಂದ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ದೂರಿದ ನಂತರ, ಅಜರುದ್ದೀನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 720/9 (ಡಿಕ್ಲೇರ್ಡ್) ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿ, ಗೆಲುವಿನತ್ತ ಮುನ್ನಡೆಯುವ ಪ್ರಬಲ ಸ್ಥಿತಿಯಲ್ಲಿದ್ದರೂ, ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸಿರಾಜ್ಗೆ ಸ್ಥಾನ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗರು ಈ ಬಲಗೈ ವೇಗದ ಬೌಲರ್ನನ್ನು ತಂಡಕ್ಕೆ ಸೇರಿಸದಿರುವ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬುಧವಾರ 'ಎಎನ್ಐ' (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಜರುದ್ದೀನ್, ಸಿರಾಜ್ ತಮ್ಮ ಆಟದತ್ತ ಗಮನಹರಿಸಿ ಉತ್ತಮ ಪ್ರದರ್ಶನವನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ದೇಶಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಬೆಂಬಲ ಸಿರಾಜ್ಗೆ ಇದೆ ಎಂದು ಅವರು ಹೇಳಿದರು.
ಇದು ಬಹಳ ದುರದೃಷ್ಟಕರ. ಸಿರಾಜ್ಗೆ ನಾನು ಹೇಳುವುದಿಷ್ಟೇ, ಅವರು ತಮ್ಮ ಕೆಲಸದ (ಆಟದ) ಕಡೆಗೆ ಗಮನಹರಿಸಲಿ. ಅವರ ಪ್ರದರ್ಶನ ಅತ್ಯುತ್ತಮವಾಗಿದೆ ಮತ್ತು ಇಡೀ ಭಾರತವೇ ಅವರನ್ನು ಬೆಂಬಲಿಸುತ್ತಿದೆ. ನಾನೂ ಕೂಡ ಅವರನ್ನು ಬೆಂಬಲಿಸುತ್ತೇನೆ. ಅವರು ಆಡಬೇಕಿತ್ತು, ಆದರೆ ಅವರನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂಬುದು ನನಗೆ ತಿಳಿದಿಲ್ಲ ಎಂದು ಅಜರುದ್ದೀನ್ ತಿಳಿಸಿದರು.
ಸದ್ಯ ನಡೆಯುತ್ತಿರುವ ವಿವಾದದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರೂ, ಸಿರಾಜ್ ಒಬ್ಬ ಪ್ರತಿಭಾವಂತ ಮತ್ತು ಪರಿಣಿತ ಬೌಲರ್ ಎಂದು ಹೇಳಿದ ಅಜರುದ್ದೀನ್, ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ ಇಂತಹ ಆಟಗಾರರನ್ನು ಪರಿಗಣಿಸಬೇಕು ಎಂದು ಹೇಳಿದರು.
ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ನಾನು ಈ ವಿವಾದದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಅವರು ಒಬ್ಬ ಅದ್ಭುತ ಮತ್ತು ಪ್ರತಿಭಾವಂತ ಬೌಲರ್ ಎಂದು ಮಾತ್ರ ಹೇಳಬಯಸುತ್ತೇನೆ. ನನ್ನ ಪ್ರಕಾರ, ಇಂತಹ ಸಂದರ್ಭದಲ್ಲಿ, ಅವರಂತಹ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂದು ಅವರು ಹೇಳಿದರು. ಭಾರತ ತಂಡದಲ್ಲಿ ಅನುಭವಿ ಬೌಲರ್ ಒಬ್ಬರ ಕೊರತೆಯು ಪಂದ್ಯವನ್ನು ಗೆಲ್ಲುವ ಅವಕಾಶದ ಮೇಲೆ ಪರಿಣಾಮ ಬೀರಿದ್ದಿರಬಹುದು. "ಬಹುಶಃ, ಭಾರತ ತಂಡದಲ್ಲಿ ಒಬ್ಬ ಉತ್ತಮ, ಅನುಭವಿ ಬೌಲರ್ ಇದ್ದಿದ್ದರೆ, ಅವರು ಪಂದ್ಯವನ್ನು ಗೆಲ್ಲಬಹುದಿತ್ತು," ಎಂದು ಅಜರುದ್ದೀನ್ ಅಭಿಪ್ರಾಯಪಟ್ಟರು.