ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕ! 6ನೇ ಬಾರಿಗೆ ಪ್ರಶಸ್ತಿ ಗೆಲ್ತಾರಾ?ನೀತಾ, ಆಕಾಶ್ ಅಂಬಾನಿ ಹೇಳಿದ್ದೇನು?

2027ರ ಮೆಗಾ ಹರಾಜಿಗೂ ಮುನ್ನ ರೋಹಿತ್ ಅವರನ್ನು ಮತ್ತೆ ನಾಯಕನಾಗಿ ಮುಂಬೈ ಇಂಡಿಯನ್ಸ್ ನೇಮಿಸಿದೆ. ಇದೇ ಅವರ ಕೊನೆಯ ಆವೃತ್ತಿಯಾಗುವ ಸಾಧ್ಯತೆಯಿದ್ದು, ಇದೊಂದು ತಾತ್ಕಾಲಿಕ ವ್ಯವಸ್ಥೆ ಎನ್ನಲಾಗುತ್ತಿದೆ.

ರೋಹಿತ್ ಶರ್ಮಾ
Nagaraja AB
Updated On : 27 Nov 2026, 6:38 pm

ಮುಂಬೈ: ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಮರಳಿದ್ದಾರೆ. ಭಾರತ ತಂಡದ ಎಲ್ಲಾ ಮಾದರಿಗಳ ನಾಯಕರಾಗಿದ್ದಾಗಲೇ, ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಆ ಘಟನೆ ನಡೆದು ನಿಖರವಾಗಿ ಮೂರು ವರ್ಷಗಳ ನಂತರ, ಇದೀಗ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಲಾಗಿದೆ.

2027ರ ಮೆಗಾ ಹರಾಜಿಗೂ ಮುನ್ನ ರೋಹಿತ್ ಅವರನ್ನು ಮತ್ತೆ ನಾಯಕನಾಗಿ ಮುಂಬೈ ಇಂಡಿಯನ್ಸ್ ನೇಮಿಸಿದೆ. ಇದೇ ಅವರ ಕೊನೆಯ ಆವೃತ್ತಿಯಾಗುವ ಸಾಧ್ಯತೆಯಿದ್ದು, ಇದೊಂದು ತಾತ್ಕಾಲಿಕ ವ್ಯವಸ್ಥೆ ಎನ್ನಲಾಗುತ್ತಿದೆ. ಮುಂಬರುವ ಆವೃತ್ತಿಗಾಗಿ 'ಮಿನಿ-ಹರಾಜು' ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕರಾಗಿ ಕಳೆದ ಮೂರು ವರ್ಷಗಳಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಲು ಮುಂಬೈ ಇಂಡಿಯನ್ಸ್ ಆಸಕ್ತಿ ಹೊಂದಿತ್ತು ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ವರ್ಗಾಯಿಸುವ (trade) ಮಾತುಕತೆಗಳು ನಡೆದಿದ್ದವು ಎಂದು ಕಳೆದ ತಿಂಗಳು ವರದಿಯಾಗಿತ್ತು.

Advertisement

Advertisement

ಕಳೆದ ಐಪಿಎಲ್ ಆವೃತ್ತಿಯ ಮಧ್ಯದಲ್ಲಿ ತಂಡವು ಕಳಪೆ ಪ್ರದರ್ಶನ ನೀಡುತ್ತಿದ್ದಾಗ, ಹಾರ್ದಿಕ್ ಪಾಂಡ್ಯ ಅವರಿಂದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ವಹಿಸಿಕೊಡಲು ಮುಂಬೈ ಇಂಡಿಯನ್ಸ್ ಬಯಸಿತ್ತು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಈ ತಿಂಗಳ ಆರಂಭದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ಗೆ ನೀಡಿ, ಬದಲಿಗೆ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು 18 ಕೋಟಿ ರೂಪಾಯಿಗೆ ಪಡೆದುಕೊಂಡಿತ್ತು.

2027ರ ಐಪಿಎಲ್ ಸೀಸನ್‌ಗೆ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಹೇಳಿಕೆಯನ್ನು ಸಂಜೆ 5:45ಕ್ಕೆ ಬಿಡುಗಡೆ ಮಾಡಲಾಗಿದೆ.

ಮುಂಬೈ ಇಂಡಿಯನ್ಸ್ ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದನ್ನು ನಾನು ಯಾವಾಗಲೂ ಹೆಮ್ಮೆಯ ವಿಷಯವೆಂದು ಭಾವಿಸಿದ್ದೇನೆ ಎಂದು ಫ್ರಾಂಚೈಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರೋಹಿತ್ ಶರ್ಮಾ ಹೇಳಿದ್ದಾರೆ.

2013ರ ಐಪಿಎಲ್ ಸೀಸನ್‌ನಲ್ಲಿ ತಂಡವು ಕಳಪೆ ಪ್ರದರ್ಶನ ನೀಡುತ್ತಿದ್ದಾಗ, ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ತಂಡವು ಅದ್ಭುತವಾಗಿ ಪುಟಿದೆದ್ದು, ಅದೇ ಸೀಸನ್‌ನಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಂತರದ 10 ವರ್ಷಗಳ ಅವಧಿಯಲ್ಲಿ ರೋಹಿತ್ ಶರ್ಮಾ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಮೊದಲ ನಾಯಕರಾದರು. ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ರೋಹಿತ್ ಶರ್ಮಾ ಮತ್ತೆ ಫ್ರಾಂಚೈಗೆ ಮರಳಿರುವುದರ ಕುರಿತು ಆಕಾಶ್ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ 20ನೇ ಮಹತ್ವದ ಸೀಸನ್‌ನಲ್ಲಿ 'ಬ್ಲೂ ಅಂಡ್ ಗೋಲ್ಡ್' (ಮುಂಬೈ ಇಂಡಿಯನ್ಸ್) ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ ಎಂಬುದು ನನಗೆ ಅತ್ಯಂತ ಸಂತೋಷದ ವಿಷಯವಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ನಮ್ಮ 'ಪಲ್ಟಾನ್' (ಅಭಿಮಾನಿ ಬಳಗ) ಜೊತೆಗೆ ರೋಹಿತ್ ಹೊಂದಿರುವ ಬಾಂಧವ್ಯ ನಿಜಕ್ಕೂ ವಿಶೇಷವಾದುದು. ಮುಂಬರುವ ಸೀಸನ್ ಕುರಿತು ನಮ್ಮ ನಡುವೆ ನಡೆದ ಮಾತುಕತೆಗಳಲ್ಲಿ, ನಾವಿಬ್ಬರೂ ಒಟ್ಟಾಗಿ ಏನನ್ನು ಸಾಧಿಸಬಹುದು ಎಂಬ ಬಗ್ಗೆ ಅಪಾರ ಉತ್ಸಾಹ ಮತ್ತು ಮಹತ್ವಾಕಾಂಕ್ಷೆ ವ್ಯಕ್ತವಾಯಿತು. ರೋಹಿತ್ ಅವರ ಅನುಭವ ಮತ್ತು ನಾಯಕತ್ವ, ಹಾಗೂ ನಾವು ರೂಪಿಸುತ್ತಿರುವ ಅತ್ಯುತ್ತಮ ತಂಡದೊಂದಿಗೆ, ಮುಂದಿನ ದಿನಗಳಲ್ಲಿ ಸಾಕಷ್ಟು ನಿರೀಕ್ಷೆಗಳಿಟ್ಟುಕೊಳ್ಳಬಹುದು. ನಮ್ಮ 'ಪಲ್ಟಾನ್' ಹೆಮ್ಮೆಪಡುವಂತಹ ಕ್ರಿಕೆಟ್ ಆಡಲು ಮತ್ತು ಒಟ್ಟಾಗಿ ಇನ್ನೂ ಅನೇಕ ವಿಶೇಷ ನೆನಪುಗಳನ್ನು ಸೃಷ್ಟಿಸಲು ನಾವು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

- ಆಕಾಶ್ ಅಂಬಾನಿ

“ನಾವು 2011ರಲ್ಲಿ ರೋಹಿತ್‌ಗಾಗಿ ಬಿಡ್ ಮಾಡಿದೆವು; ಅಂದಿನಿಂದಲೇ ಅವರು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದ ಭಾಗವಾದರು. ನಮ್ಮ ತಂಡಕ್ಕೆ ಸೇರಿದ ಆ ಯುವ ರೋಹಿತ್ ನನಗೆ ಇನ್ನೂ ನೆನಪಿದ್ದಾರೆ. ಕಳೆದ ವರ್ಷಗಳಲ್ಲಿ ಅವರು ಒಬ್ಬ ಕ್ರಿಕೆಟಿಗರಾಗಿ, ಚಾಂಪಿಯನ್ ಆಗಿ, ನಾಯಕರಾಗಿ ಮತ್ತು ಅತ್ಯುತ್ತಮ ಕುಟುಂಬಸ್ಥರಾಗಿ ಬೆಳೆದು ಬಂದಿರುವುದನ್ನು ನೋಡುವುದು ನಮಗೆ ಅಪಾರ ಸಂತೋಷ ಮತ್ತು ಭಾಗ್ಯದ ವಿಷಯವಾಗಿದೆ. ಮುಂಬೈ ಇಂಡಿಯನ್ಸ್‌ನ 20ನೇ ಸೀಸನ್ ಸಂದರ್ಭದಲ್ಲಿ ರೋಹಿತ್ ಮತ್ತೊಮ್ಮೆ ತಂಡವನ್ನು ಮುನ್ನಡೆಸುವುದನ್ನು ನೋಡುವುದು ನಮ್ಮೆಲ್ಲರಿಗೂ ಬಹಳ ವಿಶೇಷವಾದ ಕ್ಷಣವಾಗಿದೆ. ಕಳೆದ ವರ್ಷಗಳಲ್ಲಿ ಅವರು ನಮಗೆ ಅನೇಕ ಸುಂದರ ನೆನಪುಗಳನ್ನು ನೀಡಿದ್ದಾರೆ; ನಮ್ಮ 'ಪಲ್ಟನ್' (ಅಭಿಮಾನಿ ಬಳಗ) ಪಾಲಿಗೆ ಅವರು ಎಷ್ಟು ಮುಖ್ಯ ಎಂಬುದನ್ನು ನಾನು ಬಲ್ಲೆ. ಈ ಹೊಸ ಅಧ್ಯಾಯವು ಅವರಿಗೂ, ನಮ್ಮ ತಂಡಕ್ಕೂ ಹಾಗೂ ಮುಂಬೈ ಇಂಡಿಯನ್ಸ್ ಅನ್ನು ಪ್ರೀತಿಸುವ ಲಕ್ಷಾಂತರ ಅಭಿಮಾನಿಗಳಿಗೂ ಇನ್ನಷ್ಟು ಹೆಮ್ಮೆಯ ಕ್ಷಣಗಳನ್ನು ತರಲಿ ಎಂದು ನಾನು ಹಾರೈಸುತ್ತೇನೆ. ರೋಹಿತ್, ನಾವೆಲ್ಲರೂ ನಿಮಗಾಗಿ ಹುರಿದುಂಬಿಸುತ್ತಿದ್ದೇವೆ!

- ನೀತಾ ಎಂ. ಅಂಬಾನಿ

Also Read

ಧೋನಿ ನಿವೃತ್ತಿ: ರೋಹಿತ್ ಶರ್ಮಾ, ಬುಮ್ರಾ ಭಾವುಕ ವಿದಾಯ; ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ! RCB ಹೇಳಿದ್ದೇನು?

7300ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿರುವ ರೋಹಿತ್, ಐಪಿಎಲ್ (IPL) ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2011ರಲ್ಲಿ ಮುಂಬೈ ತಂಡವನ್ನು ಸೇರಿದ ರೋಹಿತ್, ಆ ತಂಡಕ್ಕಾಗಿ 220 ಐಪಿಎಲ್ ಪಂದ್ಯಗಳಲ್ಲಿ 5,698 ರನ್‌ಗಳನ್ನು ಕಲೆಹಾಕಿದ್ದಾರೆ. ರೋಹಿತ್ ಐಪಿಎಲ್‌ನಲ್ಲಿ 158 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ 87 ಪಂದ್ಯಗಳನ್ನು ಗೆದ್ದಿದ್ದಾರೆ. ಇವರ ಮುಂದೆ ಇರುವುದು ಎಂ.ಎಸ್. ಧೋನಿ ಮಾತ್ರ; ಧೋನಿ ಇತ್ತೀಚೆಗಷ್ಟೇ ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

2024ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದಾಗ, ರೋಹಿತ್ ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಒಟ್ಟಾರೆಯಾಗಿ, ಅವರು 220 ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿ 140 ಪಂದ್ಯಗಳನ್ನು ಗೆದ್ದಿದ್ದಾರೆ. ಇವರ ಗೆಲುವಿನ ಶೇಕಡಾವಾರು ಪ್ರಮಾಣ 63.33 ಆಗಿದ್ದು, ಕನಿಷ್ಠ 200 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಆರು ಮಂದಿ ಟಿ20 ನಾಯಕರಲ್ಲಿ ಇದು ಅತ್ಯುತ್ತಮ ದಾಖಲೆಯಾಗಿದೆ.

ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ನಾಯಕರಾಗಿ ರೋಹಿತ್ ಅವರ ಕೊನೆಯ ಪಂದ್ಯವು 2025ರ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದ ಪಂದ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement