ಕ್ರೈಸ್ಟ್ ಚರ್ಚ್: ನಾಲ್ಕು ವರ್ಷಗಳ ಸುದೀರ್ಘ ಬಿಡುವಿನ ನಂತರ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ತಂಡಕ್ಕೆ ಮರಳಿದ ಭುವನೇಶ್ವರ್ ಕುಮಾರ್ ಅವರು ಗುರುವಾರ ಒಂದು ವಿಶಿಷ್ಟ ದಾಖಲೆ ನಿರ್ಮಿಸುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಇಂದು ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಪವರ್ಪ್ಲೇನಲ್ಲೇ ಅತಿ ಹೆಚ್ಚು 'ಡಾಟ್ ಬಾಲ್'ಗಳನ್ನು(ರನ್ ನೀಡದ ಎಸೆತಗಳು) ಎಸೆದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅಂತರರಾಷ್ಟ್ರೀಯ ಟಿ20 ಪಂದ್ಯದ ಪವರ್ಪ್ಲೇನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಜಾಗತಿಕ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಮಾಜಿ ವೇಗಿ ಟಿಮ್ ಸೌಥಿ ಹೆಸರಿನಲ್ಲಿತ್ತು. ನ್ಯೂಝಿಲೆಂಡ್ ಪರ 126 ಟಿ20 ಪಂದ್ಯಗಳನ್ನಾಡಿರುವ ಸೌಥಿ ಪವರ್ಪ್ಲೇನಲ್ಲಿ 679 ಡಾಟ್ ಬಾಲ್ಗಳನ್ನು ಎಸೆಯುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಭುವಿ ಅಳಿಸಿ ಹಾಕಿದ್ದಾರೆ.
ಇಲ್ಲಿಯವರೆಗೆ 87 ಟಿ20 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ ಅವರು ಒಟ್ಟು 680 ಡಾಟ್ ಬಾಲ್ಗಳನ್ನು ಎಸೆದಿದ್ದಾರೆ. ಅನುಭವಿ ವೇಗದ ಬೌಲರ್ ಆಗಿರುವ ಭುವನೇಶ್ವರ್ಗೆ ಇದೊಂದು ಐತಿಹಾಸಿಕ ಸಾಧನೆಯಾಗಿದೆ.
ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೂ ಅತಿ ಹೆಚ್ಚು ಡಾಟ್ ಬಾಲ್ಗಳನ್ನು ಎಸೆದ ಸಾರ್ವಕಾಲಿಕ ದಾಖಲೆ ಭುವನೇಶ್ವರ್ ಕುಮಾರ್ ಹೆಸರಲ್ಲೇ ಇದೆ. ಭುವಿ ಒಟ್ಟು 1,960+ ಡಾಟ್ ಬಾಲ್ ಎಸೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ.