ಪಾಕಿಸ್ತಾನ-ಇಂಗ್ಲೆಂಡ್ ಸರಣಿ 
ಕ್ರಿಕೆಟ್

ಇಡೀ ಸರಣಿಯಲ್ಲಿ ಒಂದೂ ಶತಕವಿಲ್ಲ; 138 ವರ್ಷಗಳ ಬಳಿಕ ಅಪರೂಪದ ರೆಕಾರ್ಡ್, ಇಂಗ್ಲೆಂಡ್‌-ಪಾಕಿಸ್ತಾನ ಹೀನಾಯ ದಾಖಲೆ!

ಇಂಗ್ಲೆಂಡ್‌ನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಯಾವುದೇ ಬ್ಯಾಟರ್‌ ಶತಕ ಗಳಿಸದೇ ಸರಣಿ ಮುಗಿದಿರುವುದು ಬರೋಬ್ಬರಿ 138 ವರ್ಷಗಳ ಬಳಿಕ ಇದೇ ಮೊದಲ ಬಾರಿ.

ಲಂಡನ್: ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ 138 ವರ್ಷಗಳ ಹಳೆಯ ಹೀನಾಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ಇದು ಉಭಯ ತಂಡಗಳಿಗೆ ನುಂಗಲಾರದ ತುತ್ತಾಗಿದೆ.

ಹೌದು.. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ 3-0 ಅಂತರದಲ್ಲಿ ಸೋಲು ಕಂಡಿದೆ. ಆದರೆ ಈ ಸರಣಿ ಫಲಿತಾಂಶದ ಜೊತೆಗೆ ಅಪರೂಪದ ಅಂಕಿ-ಅಂಶವೊಂದಕ್ಕೂ ಸಾಕ್ಷಿಯಾಗಿದ್ದು, ಮೂರು ಪಂದ್ಯಗಳ ಇಡೀ ಸರಣಿಯಲ್ಲಿ ಎರಡೂ ತಂಡಗಳ ಯಾವುದೇ ಬ್ಯಾಟರ್‌ ಶತಕ ಬಾರಿಸಲು ಸಾಧ್ಯವಾಗಿಲ್ಲ.

ಇಂಗ್ಲೆಂಡ್‌ನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಯಾವುದೇ ಬ್ಯಾಟರ್‌ ಶತಕ ಗಳಿಸದೇ ಸರಣಿ ಮುಗಿದಿರುವುದು ಬರೋಬ್ಬರಿ 138 ವರ್ಷಗಳ ಬಳಿಕ ಇದೇ ಮೊದಲ ಬಾರಿ. ಈ ಹಿಂದೆ 1888ರ ಆಶಸ್‌ ಸರಣಿಯಲ್ಲಿ ಇಂತಹ ಅಪರೂಪದ ದಾಖಲೆ ನಿರ್ಮಾಣವಾಗಿತ್ತು.

ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೂರು ಪಂದ್ಯಗಳ ಸರಣಿಯಲ್ಲಿ ಒಂದೂ ವೈಯಕ್ತಿಕ ಶತಕ ದಾಖಲಾಗದೆ ಸರಣಿ ಮುಗಿದಿರುವುದು ಇದು ಕೇವಲ 8ನೇ ಬಾರಿ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಶತಕದ ಹೊಸ್ತಿಲಲ್ಲಿ ಎಡವಿದ ಬ್ಯಾಟರ್‌ಗಳು

ಅಂದಹಾಗೆ ಈ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ಹಲವು ಬ್ಯಾಟರ್‌ಗಳು ಶತಕದ ಸನಿಹಕ್ಕೆ ಬಂದರೂ ಮೂರು ಅಂಕಿಯ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಸೌದ್‌ ಶಕೀಲ್‌ 97 ರನ್‌ ಗಳಿಸಿ ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದರು. ಲಾರ್ಡ್ಸ್‌ನಲ್ಲಿ ಅವರು ಈ ಸಾಧನೆಗೆ ಹತ್ತಿರ ಬಂದಿದ್ದರು.

ಪಾಕಿಸ್ತಾನದ ನಾಯಕ ಶಾನ್‌ ಮಸೂದ್‌ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ 95 ರನ್‌ ಗಳಿಸಿ ಶತಕ ತಪ್ಪಿಸಿಕೊಂಡರು. ಇಂಗ್ಲೆಂಡ್‌ ಪರ ಹ್ಯಾರಿ ಬ್ರೂಕ್‌ ಕೂಡ ಶತಕದ ಸಮೀಪ ಬಂದಿದ್ದರು. ಹೆಡಿಂಗ್ಲೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರು 91 ರನ್‌ ಗಳಿಸಿದರೆ, ಮೂರನೇ ಟೆಸ್ಟ್‌ನಲ್ಲಿ 75 ರನ್‌ ಗಳಿಸಿದರು.

ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 130 ರನ್‌ಗಳ ಗುರಿ ಬೆನ್ನಟ್ಟುವಾಗ ಜೋ ರೂಟ್‌ ಅಜೇಯ 62 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇಂಗ್ಲೆಂಡ್‌ ಎಂಟು ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಇದೇ ಚೇಸ್‌ನಲ್ಲಿ ಜೋರ್ಡನ್‌ ಕಾಕ್ಸ್‌ ಅಜೇಯ 59 ರನ್‌ ಗಳಿಸಿದರು.

ಮೂರನೇ ಟೆಸ್ಟ್‌ನಲ್ಲಿ ಪಾಕಿಸ್ತಾನದ ರಜಾವುಲ್ಲಾ ಕೂಡ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಕೇವಲ 63 ಎಸೆತಗಳಲ್ಲಿ 81 ರನ್‌ ಸಿಡಿಸಿದ ಅವರು 9 ಸಿಕ್ಸರ್‌ಗಳನ್ನು ಬಾರಿಸಿದರು. ಆದರೆ ಅವರಿಗೂ ಶತಕದ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೂರು ಪಂದ್ಯಗಳಲ್ಲೂ ಬ್ಯಾಟರ್‌ಗಳು 60, 70 ಮತ್ತು 90ರ ಗಡಿ ತಲುಪಿದರೂ ಶತಕ ಗಳಿಸಲು ವಿಫಲರಾದರು.

ಇಂಗ್ಲೆಂಡ್‌ ಪ್ರಾಬಲ್ಯ

ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಮತ್ತು 103 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿತ್ತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಇಂಗ್ಲೆಂಡ್‌ ಪಾಕಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಇಂಗ್ಲೆಂಡ್‌ ಪರ ಆಲಿ ರಾಬಿನ್ಸನ್‌ ಸರಣಿಯ ಅತ್ಯುತ್ತಮ ಬೌಲರ್‌ ಎನಿಸಿಕೊಂಡರು. ಮೂರು ಟೆಸ್ಟ್‌ ಪಂದ್ಯಗಳಲ್ಲಿ ಅವರು ಒಟ್ಟು 21 ವಿಕೆಟ್‌ಗಳನ್ನು ಕಬಳಿಸಿದರು. ಅವರ ಸತತ ವಿಕೆಟ್‌ ಬೇಟೆ ಪಾಕಿಸ್ತಾನದ ಬ್ಯಾಟಿಂಗ್‌ ಪಡೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

138 ವರ್ಷಗಳ ದಾಖಲೆ

ಇಂಗ್ಲೆಂಡ್‌ 3-0 ಅಂತರದಲ್ಲಿ ಸರಣಿ ಗೆದ್ದು ಪಾಕಿಸ್ತಾನಕ್ಕೆ ವೈಟ್‌ವಾಶ್‌ ನೀಡಿತು. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಸಾಧಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2022-23ರಲ್ಲಿ ಇಂಗ್ಲೆಂಡ್‌ ಇದೇ ಸಾಧನೆ ಮಾಡಿತ್ತು. ಬ್ಯಾಟರ್‌ಗಳ ಶತಕದ ಕೊರತೆ ಮತ್ತು ಇಂಗ್ಲೆಂಡ್‌ನ ಬೌಲಿಂಗ್‌ ಪ್ರಾಬಲ್ಯದಿಂದಾಗಿ ಈ ಸರಣಿ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಇಂಗ್ಲೆಂಡ್‌ನಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಒಂದೂ ಶತಕ ದಾಖಲಾಗದೆ ಸರಣಿ ಮುಗಿದಿದ್ದ ಹಿಂದಿನ ಸಂದರ್ಭ 1888ರದ್ದು. ಬರೋಬ್ಬರಿ 138 ವರ್ಷಗಳ ಬಳಿಕ ಮತ್ತೊಮ್ಮೆ ಅದೇ ರೀತಿಯ ಅಪರೂಪದ ದಾಖಲೆ ನಿರ್ಮಾಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ದಲಿತರು, ಅಲ್ಪಸಂಖ್ಯಾತರೇ ಬಿಜೆಪಿಗೆ ಸೇರಬೇಡಿ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ಕರೆ

2029ಕ್ಕೂ ಮುನ್ನ NDA ಸರ್ಕಾರವಿರುವ ಎಲ್ಲಾ 21 ರಾಜ್ಯಗಳಲ್ಲಿ UCC ಜಾರಿ: ಗೃಹ ಸಚಿವ ಅಮಿತ್ ಶಾ

ಪ್ರಧಾನಿ ಮೋದಿ ಭೇಟಿ ಮಾಡಿದ ಸ್ಕೂಲ್‌ಮೇಟ್; ಭೂ ವಿವಾದದ ಬಗ್ಗೆ CBI ತನಿಖೆಗೆ ಮನವಿ!

"ಇಂತಹ ಆಟಗಾರರನ್ನು ಇಟ್ಟುಕೊಂಡು ಏನು ಮಾಡುತ್ತಿದ್ದಾರೆ?"; ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಥಿತಿ ಕಂಡು Dinesh Karthik ಗರಂ