ನವದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಗುರುವಾರ ನಡೆದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.
ಈ ಮಧ್ಯೆ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಫ್ಘಾನಿಸ್ತಾನದ ಅಭಿಮಾನಿಯೊಬ್ಬರು ಮೈದಾನದಿಂದ ಹೊರಬಂದ ಕೂಡಲೇ ನೀಡಿದ ಹೇಳಿಕೆ ಇದೀಗ ಭಾರಿ ವೈರಲ್ ಆಗಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ವೇಳೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಫ್ಘಾನಿಸ್ತಾನದ ಮಹಿಳಾ ಅಭಿಮಾನಿಯೊಬ್ಬರಿಗೆ ವಿಡಿಯೋ ಕ್ರಿಯೇಟರ್ ರೊಂದಿಗೆ ನಡೆದ ತಮಾಷೆಯ ಸಂವಾದದ ವೇಳೆ ಭಾರತೀಯ ಕ್ರಿಕೆಟ್ ತಂಡದ ಕುರಿತು ಒಂದು ವಿಶಿಷ್ಟವಾದ ಪ್ರಶ್ನೆಯನ್ನು ಕೇಳಲಾಗಿದೆ.
ನಿಮಗೆ ಒಂದು ಅವಕಾಶ ಸಿಕ್ಕರೆ ಪ್ರಸ್ತುತ ಭಾರತೀಯ ತಂಡದಲ್ಲಿರುವ ಆಟಗಾರರಲ್ಲಿ ಯಾರನ್ನು "ಅಪಹರಿಸಿ" ಅಫ್ಘಾನಿಸ್ತಾನಕ್ಕೆ ಕರೆದೊಯ್ಯುತ್ತೀರಿ ಎಂದು ವಿಡಿಯೋ ಕ್ರಿಯೇಟರ್ ಆ ಅಭಿಮಾನಿಯನ್ನು ಕೇಳಿದ್ದು, ಅದಕ್ಕೆ ಯುವತಿ ಯಾವುದೇ ಹೆಚ್ಚಿನ ಹಿಂಜರಿಕೆಯಿಲ್ಲದೆ ಅಭಿಷೇಕ್ ಶರ್ಮಾ ಅವರನ್ನು ಕಿಡ್ನ್ಯಾಪ್ ಮಾಡುವುದಾಗಿ ಹೇಳಿದ್ದಾರೆ.
ಇದೊಂದು ತಮಾಷೆಯ ಮಾತುಕತೆಯಾಗಿದ್ದರೂ, ನೆಟ್ಟಿಗರಿಗೆ ಇದು ಖುಷಿ ನೀಡಿದೆ. ಈ ವಿಡಿಯೋ ಹರಿದಾಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ಕಮೆಂಟ್ಗಳ ಸುರಿಮಳೆ ಹರಿದುಬಂದಿದೆ.
ಅಫ್ಘಾನ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 9 ಬೌಂಡರಿ ಬಾರಿಸುವ ಮೂಲಕ ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಅತಿ ವೇಗವಾಗಿ ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.