ದಸರಾ ಕರ್ನಾಟಕದ ನಾಡ ಹಬ್ಬ. ಶರದೃತುವಿನ ಮೊದಲ ದೊಡ್ಡ ಹಬ್ಬವೇ ದಸರೆ. ದಸರೆಗೆ ದಶಹರ, ದಶರಾತ್ರಿ, ನವರಾತ್ರಿ, ಶರನ್ನವರಾತ್ರಿ ಎಂಬ ಹೆಸರೂ ಉಂಟು. ಮಹಾಲಯ ಅಮಾವಾಸ್ಯೆ ಕಳೆದ ಬಳಿಕ ಮಾರನೇ ದಿನ ಬರುವ ಆಶ್ವಯುಜ ಪಾಡ್ಯ ಮನೆ ಮನೆಯಲ್ಲೂ ಸಂಭ್ರಮ, ಸಂತಸ ತರುತ್ತದೆ.
ಮೈಸೂರು ಭಾಗದಲ್ಲಂತೂ ಹೆಣ್ಣು ಮಕ್ಕಳು ಈ ಹಬ್ಬಕ್ಕಾಗಿ ಕಾತರಿಸುತ್ತಾರೆ. ಮನೆ ಮನೆಗಳಲ್ಲೂ ಬೊಂಬೆಯನ್ನು ಕೂರಿಸಲು ಸಜ್ಜಾಗುತ್ತಾರೆ. ಮನೆಯನ್ನು ಸಾರಿಸಿ, ಗುಡಿಸಿ, ರಂಗವಲ್ಲಿಯಲ್ಲಿ ಅಲಂಕರಿಸುತ್ತಾರೆ. ಹಂತ ಹಂತವಾಗಿ ಹಲಗೆಯನ್ನು ಮೆಟ್ಟಿಲಿನಂತೆ ಜೋಡಿಸಿ ವಿವಿಧ ಹಂತದಲ್ಲಿ ನಾನಾ ಬಗೆಯ ಬಣ್ಣ ಬಣ್ಣದ ಬೊಂಬೆಗಳನ್ನು ಕೂರಿಸುತ್ತಾರೆ.
ದಸರಾ ಬೊಂಬೆ ಹಬ್ಬ, ರಾಜ ರಾಣಿ ಗೊಂಬೆ, ಪಟ್ಟದ ಬೊಂಬೆ, ಮೈಸೂರು ಮನೆತನ, ಮನೆ ಮನೆಯಲ್ಲೂ ಬೊಂಬೆ ಹಬ್ಬಮೈಸೂರು ಪ್ರಾಂತದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎಂಬ
ಮಾತಿದ್ದು, ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾರಣ, ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಅಂದರೆ ರಾಜ ರಾಣಿಯರ ಬೊಂಬೆಯನ್ನು ಮನೆಯಲ್ಲಿ ಕೂರಿಸಿ ಪೂಜಿಸುವುದು ವಾಡಿಕೆ. ಇಂದಿಗೂ ಮೈಸೂರು ಭಾಗದಲ್ಲಿ ಮದುವೆಯ ಸಂದರ್ಭದಲ್ಲಿ ಅಂದರೆ ವರಪೂಜೆಯ ದಿನ ಪಟ್ಟದ ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಇದೆ.
ಈ ರಾಜಾ ರಾಣಿ ಬೊಂಬೆಗಳ ಜೊತೆಗೆ ಹಲವು ಬಗೆಯ ಬೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ, ಪ್ರತಿ ಸಂಜೆ ಆರತಿ ಮಾಡಿ ಬೊಂಬೆ ಬಾಗಿನ ನೀಡುವುದೂ ಸಂಪ್ರದಾಯಗಳಲ್ಲೊಂದು.
ಬೊಂಬೆಗಳ ಜತೆ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ಹಾಗೂ ಹನುಮನ ಬೊಂಬೆಗಳನ್ನೂ ಇಡುತ್ತಾರೆ. ಶ್ರೀರಾಮ ಈ ಅವಧಿಯಲ್ಲೇ ರಾವಣನನ್ನು ಸಂಹರಿಸಿದ್ದು ಎನ್ನುವ ಕಾರಣದಿಂದ ರಾಮನ ಬೊಂಬೆಗಳನ್ನೂ ಇಡುತ್ತಾರೆ. ಕೆಲವರ ಮನೆಗಳಲ್ಲಿ ದಶಾವತಾರದ ಬೊಂಬೆಗಳನ್ನೂ ಕೂರಿಸುತ್ತಾರೆ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ದಸರೆ ಬೊಂಬೆಹಬ್ಬ ಎಂದೇ ಖ್ಯಾತಿ ಪಡೆದಿದೆ. ಸಂಜೆ ಕೋಲಾಟವೂ ಈ ಹಬ್ಬದ ವಿಶೇಷಗಳಲ್ಲೊಂದು. ಸರಸ್ವತಿ ಹಬ್ಬದ ದಿನ ಬೊಂಬೆಗಳ ಜೊತೆಗೆ ಶಾರದೆಯ ಬೊಂಬೆಯನ್ನೂ ಕೂರಿಸಿ, ಕಳಶ ಇಟ್ಟು ಸೀರೆ ಉಡಿಸಿ ವಿಶೇಷವಾಗಿ ಪೂಜಿಸಲಾಗುತ್ತದೆ. ಅಂದು ಪುಸ್ತಕ, ಪೆನ್ಸಿಲ್, ರಬ್ಬರ್, ಪೆನ್ ಗಳಿಗೂ ಪೂಜೆ ನಡೆಯುತ್ತದೆ.
ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳ ಕೂರಿಸಿ ಪೂಜಿಸಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದ ಕೆಲವರು ಶಾರದೆಯ ಹಬ್ಬದಿಂದ ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ. ಕಾಳಿಕಾ ಪುರಾಣದಲ್ಲಿ ಹೇಳಿರುವಂತೆ ಮೈಸೂರು ಸೀಮೆಯಲ್ಲಿ ಹಬ್ಬದ ಆಚರಣೆ ನಡೆಯುತ್ತದೆ.