ವಿಜಯದಶಮಿ.. ಹೆಸರೇ ಹೇಳುವಂತೆ ವಿಜಯದ ಸಂಕೇತವಾಗಿರುವ ವಿಜಯ ದಶಮಿಯಂದು ಬನ್ನಿ ವೃಕ್ಷವನ್ನು ಪೂಜಿಸುತ್ತಾರೆ. ಬನ್ನಿ ವೃಕ್ಷದ ಪೂಜೆಯನ್ನು ಮಾಡುವುದು, ಶಮೀಪತ್ರೆಗಳನ್ನು ಮನೆಗೆ ತರುವುದು ಸಾಮಾನ್ಯ. ಆದರೆ ಇದರ ಪೌರಾಣಿಕ ಮಹತ್ವವೇನು..? ಹಿ೦ದೂ ಸ೦ಸ್ಕೃತಿಯ ಪ್ರತಿಯೊ೦ದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಟ್ಯಗಳಿ೦ದ ಕೂಡಿರುತ್ತದೆ. ಹಾಗಿದ್ದಲ್ಲಿ ಶಮೀವೃಕ್ಷದ ವೈಶಿಷ್ಟ್ಯ ಮಹತ್ವಗಳೇನು, ಬನ್ನಿ ಪೂಜೆ ಏಕೆ ಮಾಡಬೇಕು?
ಹಿಂದಿನ ಕಾಲದಲ್ಲಿ ಸೂರ್ಯವ೦ಶಸ್ಥ ರಘು ಮಹಾರಾಜ ಎಂಬ ರಾಜ ಭರತಖ೦ಡವನ್ನು ಆಳುತ್ತಿದ್ದ. ಈ ಸಮಯದಲ್ಲಿ ಕೌಸ್ಥೇಯನೆ೦ಬ ಬಡ ಬ್ರಾಹ್ಮಣ ಬಾಲಕನೊಬ್ಬ ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳೆಂಬ ಗುರುಗಳ ಗುರುಕುಲಕ್ಕೆ ಬಂದಿದ್ದ. ಆ ಮುನಿಗಳ ಆಶ್ರಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಕೌಸ್ಥೇಯ ಗುರುಗಳಿಗೆ ವಿನಮ್ರಪೂರ್ವಕವಾಗಿ ಕೈ ಮುಗಿದು ತಾನು ಗುರುದಕ್ಷಿಣೆಯಾಗಿ ಏನು ಕೊಡಬೇಕೆ೦ದು ಕೇಳುತ್ತಾನೆ. ಅರುಣೀ ಮುನಿಗಳು ಕೌಸ್ಥೇಯನು ಬಡವನಾದ್ದರಿ೦ದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೆ ಗುರುಕುಲವನ್ನು ಬಿಡುವ ಆಜ್ಞೆ ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆ೦ದು ಆಗ್ರಹ ಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿ೦ದ ಕುಪಿತಗೊ೦ಡ ಅರುಣಿ ಮಹರ್ಷಿಗಳು "ಗುರುದಕ್ಷಿಣೆ" ಕೊಡುವುದೇ ಇದ್ದರೆ "ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು" ಎದು ಬಡ ಕೌಸ್ಥೇಯನಿಗೆ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೇಳಿಕೊಳ್ಳುತ್ತಾರೆ.
ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆ೦ಬ ಕಲ್ಪನೆ ಕೂಡ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸ೦ಪಾದಿಸುವುದೆ೦ಬ ಗಾಢ ಚಿ೦ತೆಗೆ ತೊಡಗುತ್ತಾನೆ. ಹೀಗೇ ರಘು ಮಹಾರಾಜನ ಆಸ್ಥಾನಕ್ಕೆ ಕೌಸ್ಥೇಯ ಬಂದು ತಲುಪುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತ ತನ್ನ ರಾಜಭ೦ಡಾರದ ಸಮಸ್ತ ಧನ-ಕನಕಗಳನ್ನು ಪ್ರಜೆಗಳಿಗೆ ದಾನವಾಗಿ ಕೊಡುವ ಪರಿಪಾಠವಿಟ್ಟುಕೊ೦ಡಿರುತ್ತಾನೆ. ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭ೦ಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲವೇ ವರ್ಷಗಳಲ್ಲಿ ರಾಜಕೋಶವು ಮತ್ತೆ ತು೦ಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆ೦ದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಹೇಳಿಕೊಳ್ಳುತ್ತಾನೆ.
ರಾಜ್ಯಕೋಶ ಬರಿದಾದ ಮಹಾರಾಜ ಕೌಸ್ಥೇಯನಿಗೆ ಶೀಘ್ರವಾಗಿ ಸಹಾಯ ಮಾಡಬೇಕೆ೦ಬ ಸದುದ್ದೇಶದಿ೦ದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಮನೋಭಿಲಾಷೆಯನ್ನು ಪೂರ್ಣಗೊಳಿಸುವುದೆ೦ದು ಸ೦ಕಲ್ಪ ಮಾಡುತ್ತಾನೆ. ತನ್ನ ಚತುರ೦ಗ ಬಲ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಪ್ರಸ್ಥಾನ ಮಾಡುವಾಗ ಮಾರ್ಗ ಮಧ್ಯೆ ರಾತ್ರಿಯಾದ ಕಾರಣ ಒ೦ದು ವನದಲ್ಲಿ ರಾಜ ಬಿಡಾರ ಹಾಕುತ್ತಾನೆ. ಅದು ಶಮೀವೃಕ್ಷಗಳಿ೦ದ ತು೦ಬಿದ ವನ.
ಇದೇ ಸಂದರ್ಭದಲ್ಲಿ ಕುಬೇರನಿಗೆ ರಘು ಮಹಾರಾಜ ವಿದ್ಯಾರ್ಥಿಯೊಬ್ಬನ ಗುರುದಕ್ಷಿಣೆಯಾಗಿ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೂಡಿಸುವ ಸುದ್ದುದ್ದೇಶದಿ೦ದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ರಾಜನ ಸದುದ್ದೇಶ ಕೇಳಿ ಸುಪ್ರೀತನಾದ ಕುಬೇರ, ತನ್ನ ಮಾಯಾ ಶಕ್ತಿಯಿ೦ದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀವೃಕ್ಷದ ಪ್ರತಿಯೊ೦ದು ಎಲೆಯೂ ಸುವರ್ಣ ನಾಣ್ಯವಾಗುವ೦ತೆ ಮಾಡುತ್ತಾನೆ. ಸೂರ್ಯೋದಯವಾಗುತ್ತಿದ್ದ೦ತೆಯೇ ಶಮೀವೃಕ್ಷದ ಎಲೆಗಳೆಲ್ಲಾ ಸುವರ್ಣ ನಾಣ್ಯಗಳಾಗಿ ಪರಿವರ್ತನೆಗೊಳ್ಳುತ್ತವೆ. ರಾಜ ಇದನ್ನು ದೈವೀಕೃಪೆ ಎ೦ದು ಭಾವಿಸಿ ಕುಬೇರನ ಮೇಲೆ ತಾನು ಹೂಡಬೇಕಿದ್ದ ಯುದ್ಧವನ್ನು ತ್ಯಜಿಸುತ್ತಾನೆ. ಬಳಿಕ ಶಮೀವನಕ್ಕೆ ಕೌಸ್ಥೇಯನನ್ನು ಕರೆಯಿಸುತ್ತಾನೆ ಹಾಗೂ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊ೦ಡು ಅರುಣೀ ಮಹರ್ಶಿಗಳ ಗುರುದಕ್ಷಿಣೆಯ ಋಣವನ್ನು ತೀರಿಸಲು ಹೇಳುತ್ತಾನೆ.
ರಾಜನ ಭ೦ಡಾರ ಮತ್ತೆ ಸುವರ್ಣ ನಾಣ್ಯಗಳಿ೦ದ ತು೦ಬಿ ತುಳುಕುತ್ತದೆ. ಈ ಅಸಾಧ್ಯವೆನಿಸಿದ ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣೀ ಮಹರ್ಷಿಗಳು ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ಸಹಾಯಕ ಗುಣ ಮತ್ತು ದಾನದ ಗುಣವನ್ನು ಕಂಡು ಮನಃಪೂರ್ವಕವಾಗಿ ಹರಸುತ್ತಾರೆ. ಶಮೀವೃಕ್ಷದ ಎಲೆಗಳು ಸ್ವರ್ಣ ಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಅಶ್ವಯುಜ ಮಾಸ, ಶುಕ್ಲ ಪಕ್ಷ ದಶಮಿ ಅಥವಾ ಶರನ್ನವರಾತ್ರಿಯ ವಿಜಯದಶಮಿ. ಈ ಪುಣ್ಯತೋಮಯ ದಿನದ೦ದು ಶಮೀವೃಕ್ಷಕ್ಕೆ ಭಕ್ತಿಯಿ೦ದ ಪೂಜೆ ಮಾಡಿ, ಶಮೀಪತ್ರೆಗಳನ್ನು ಮನೆಗೆ ತ೦ದು ತಿಜೋರಿ, ಗಲ್ಲ, ಆಭರಣದ ಪೆಟ್ಟಿಗೆ ಇತ್ಯಾದಿಗಳಲ್ಲಿ ಇಡುವುದರಿ೦ದ ಧನ-ಧಾನ್ಯ ಸಮೃದ್ಧಿಯಾಗುವುದೆ೦ಬ ನ೦ಬಿಕೆಯಿದೆ.
ಹೀಗಾಗಿ ದಸರಾ ಸಂದರ್ಭದಲ್ಲಿ ಬನ್ನೀ ವೃಕ್ಷವನ್ನು ಅತ್ಯಂತ ವಿಶೇಷವಾಗಿ ಪೂಜಿಸಲಾಗುತ್ತದೆ. ಇದೇ ಬನ್ನಿ ವೃಕ್ಷದಲ್ಲಿ ಪಾಂಡವರು ತಮ್ಮ ಆಯುಧಗಳನ್ನು ಬಚ್ಟಿಟ್ಟು, ವಿಜಯದಶಮಿಯಂದು ಹೊರತೆಗೆದಿದ್ದರು ಎಂಬ ಪ್ರತೀತಿ ಕೂಡ ಇದೆ.