ಪಾರ್ವತಿ ದೇವಿಯ ರೌದ್ರಾವತಾರದಲ್ಲಿ ಮಾತೆ ದುರ್ಗಾದೇವಿಯ ಅವತಾರವೂ ಒಂದಾಗಿದೆ. ಹಿಂದೆ ಮಹಿಷಾಸುರ ಎಂಬ ರಾಕ್ಷಸ ದೇವತೆಗಳಿಗೆ ಕಷ್ಟಗಳನ್ನು ಕೊಡುತ್ತಿದ್ದನು. ಒಂದು ಬಾರಿ ತನ್ನ ಪರಾಕ್ರಮದ ಬಗ್ಗೆ ದೇವತೆಗಳಲ್ಲಿ ಭಯ ಹುಟ್ಟಿಸಲು ಮಹಿಷಾಸುರ ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ ಅನ್ಯಾಯದಿಂದ ನೊಂದ ದೆವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಮೊರೆ ಹೋದರು.
ದೇವತೆಗಳ ಪ್ರಾರ್ಥನೆಯಿಂದಾಗಿ ಎಲ್ಲಾ ದೇವರು ಒಂದು ಕಡೆ ಸೇರಿ ತಮ್ಮ ತಮ್ಮ ಶಕ್ತಿಯನ್ನು ಸೇರಿಸಿ ದೇವಿಯೊಬ್ಬಳನ್ನು ನಿರ್ಮಾಣ ಮಾಡಿದರು. ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದೊಂದು ಅಂಗವನ್ನು ನೀಡಿ ದೇವಿಯ ನಿರ್ಮಾಣವಾಯಿತು. ಆ ದೇವಿಯೇ ದುರ್ಗಾದೇವಿ. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದುರ್ಗಾ ದೇವಿಗೆ ಆಯುಧಗಳನ್ನು ನೀಡಿದರು.
ಈ ರೀತಿ ದುರ್ಗಾದೇವಿಯೇ ಮಹಿಷಾಸುರನನ್ನು ವಧಿಸಲು ರೌದ್ರರೂಪವನ್ನು ತಾಳಿದರು. ಮಹಿಷಾಸುರ ಮತ್ತು ದೇವಿಗೆ ಒಂಬತ್ತು ದಿನಗಳ ಕಾಲ ಘೋರ ಯುದ್ಧವಾಯಿತು. ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನ್ನು ವಧಿಸಿದರು. ಮಹಿಷಾಸುರನನ್ನು ವಧಿಸಿದರಿಂದ ದೇವಿಗೆ ಮಹಿಷಾಸುರಮರ್ದಿನಿ ಎಂದು ಹೆಸರು ಬಂದಿತು. ಇದರ ನೆನಪಿಗಾಗಿ ನಾವು ನವರಾತ್ರಿಯನ್ನು ಆಚರಿಸುತ್ತೇವೆ.