ಜಿಲ್ಲಾ ಸುದ್ದಿ

ಲಿಮ್ಕಾ ದಾಖಲೆಗೆ ಮುದ್ದೆ

Rashmi Kasaragodu

ಮಂಡ್ಯ: ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ನಡೆಯುತ್ತಿರುವ  ಸುವರ್ಣ ವಾಹಿನಿಯ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ತಯಾರಿಸಿದ 1500 ಕೆ.ಜಿ ತೂಕದ ರಾಗಿ ಮುದ್ದೆ ಲಿಮ್ಕಾ ದಾಖಲೆಗೆ ಸೇರಿದೆ.

ಬಹುಶಃ ಇತಿಹಾಸದಲ್ಲಿಯೇ ಇಷ್ಟೊಂದು ಬೃಹತ್ ಗಾತ್ರದ ಮುದ್ದೆಯನ್ನು ತಯಾರು ಮಾಡಿರುವುದು ಇದೇ ಪ್ರಥಮ. ಹಾಗಾಗಿ ಈ ಮುದ್ದೆ ಗಿನ್ನಿಸ್ ರೆಕಾರ್ಡ್ ಪಡೆದರೂ ಆಶ್ಚರ್ಯ ಪಡಬೇಕಾಗಿಲ್ಲ.

ಕಳೆದ 52 ದಿನಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 52ನೇ ದಿನವಾದ ಗುರುವಾರ ರಾಗಿ ಮುದ್ದೆ ತಯಾರಿಸುವ ಮೂಲಕ ಸಾಧನೆ ಮಾಡಬೇಕೆಂದು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ರಾಗಶ್ರೀ, ರವಿಕಾ, ಅಕ್ಷಿತಾ, ದೀಪ್ತಿ ಅವರು ತೀರ್ಮಾನಿಸಿದರು.

ಹೀಗಾಗಿ ರಾಯಸಮುದ್ರ ಗ್ರಾಮದ ಮನೆ ಮನೆಯಲ್ಲಿ ಉಚಿತವಾಗಿ 15 ಕ್ವಿಂಟಾಲ್ ರಾಗಿಯನ್ನು ಸಂಗ್ರಹಿಸಿ, 13 ಮುದ್ದೆ ತಯಾರಿಸುವ ನುರಿತ ಬಾಣಿಸಿಗರ ಸಹಾಯದಿಂದ ಮುದ್ದೆ ತಯಾರಿಸುವ ಕಾರ್ಯದಲ್ಲಿ ಮಗ್ನರಾದರು. ಈ ಮುದ್ದೆಯನ್ನು ಸುಮಾರು  6 ಅಡಿ ಅಗಲ, 8 ಅಡಿ ಎತ್ತರದಲ್ಲಿ ತಯಾರಿಸಲಾಯಿತು.

ನಗರ ಪ್ರದೇಶದಲ್ಲಿ ರಾಗಿಯ ಬಗ್ಗೆ ಕೀಳರಿಮೆ ಇದೆ. ಇದನ್ನು ದೂರ ಮಾಡಿ ಎಲ್ಲ ಮರ್ಗದ ಜನರು ರಾಗಿಯನ್ನು ಉಪಯೋಗಿಸುವಂತಾಗಬೇಕು. ರಾಗಿಗೆ ಉತ್ತಮ ಬೇಡಿಕೆಯನ್ನು ವಿಶ್ವದಾದ್ಯಂತ ಸೃಷ್ಟಿಸಿಕೊಡುವ ಮೂಲಕ ರಾಗಿ ಬಳೆಯುವ ಕರ್ನಾಟಕ ರೈತರ ಪಾಲಿಗೆ ವರದಾನವಾಗುವಂತೆ ಮಾಡುವ ಪ್ರಮುಖ ಉದ್ದೇಶ ಇದರಲ್ಲಿ ಅಡಗಿದೆ ಎನ್ನುತ್ತಾರೆ ಸುವರ್ಣ ವಾಹಿನಿ ಕಾರ್ಯಕ್ರಮ ಮುಖ್ಯಸ್ಥ ಸುಧೀಂದ್ರ ಭಾರದ್ವಾಜ್.

SCROLL FOR NEXT