ಜಿಲ್ಲಾ ಸುದ್ದಿ

ಬಂಡೀಪುರದಲ್ಲಿ ರಾತ್ರಿ ಸಂಚಾರವಿಲ್ಲ

Lakshmi R

ಬಂಡೀಪುರ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕರ್ನಾಟಕದಿಂದ ಕೇರಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸಂಚರಿಸಬೇಕಾದರೆ ಬಂಡೀಪುರ ಹುಲಿ ಅಭಯಾರಣ್ಯ ಪ್ರದೇಶದ ಮೂಲಕ ಸಾಗಬೇಕು.

ಆದರೆ ಚಾಮರಾಜನಗರ ಜಿಲ್ಲಾಧಿಕಾರಿ 2009ರ ಜೂ.3ರಂದು ಕೇರಳ-ಕರ್ನಾಟಕ ಸಂಪರ್ಕಿಸುವ ರಾ.ಹೆ.ಸಂಖ್ಯೆ 212ರಲ್ಲಿ ರಾತ್ರಿ 9 ರಿಂದ ಬೆಳಗಿನ ಜಾವ 6ರವರೆಗೆ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಸ್ಥಳೀಯ ಶಾಸಕ ಪಿ.ಕೃಷ್ಣಪ್ರಸಾದ್ ಅವರ ಒತ್ತಾಯದ ಮೇರೆಗೆ 2009ರ ಜೂ.10ರಂದು ಆದೇಶ ಹಿಂಪಡೆದಿದ್ದರು. ಇದನ್ನು ಆಕ್ಷೇಪಿಸಿ ಸ್ಥಳೀಯ ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆದಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಈ ದಿಸೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅರ್ಜಿ ಸಲ್ಲಿಸಿ, ಸಂಚಾರ ನಿಷೇಧಿಸುವುದರಿಂದ ರಾತ್ರಿ ವೇಳೆ ಕೇವಲ ಎರಡು ಬಸ್ ಸಂಚರಿಸುವಂತಾಗಿದೆ. ಆದ್ದರಿಂದ ನಿಷೇಧ ತೆರವುಗೊಳಿಸುವಂತೆ ಕೋರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಎಸ್.ಪಾಟೀಲ್ ಅವರಿದ್ದ ಏಕಸದಸ್ಯ ಪೀಠ, ಸಂಚಾರ ನಿಷೇಧವನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 9ರಿಂದ ಬೆಳಗಿನ ಜಾವ 6 ಗಂಟೆಯವರೆಗಿನ ಸಂಚಾರ ನಿಷೇಧ ಮುಂದುವರಿಯಲಿದೆ. ಈ ಹಿಂದೆ ಬಂಡೀಪುರ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶವಿದ್ದಾಗ ಅರಣ್ಯ ಸಂಪತ್ತು ಲೂಟಿಕೋರರ ಪಾಲಾಗುತ್ತಿತ್ತು. ಇದನ್ನು ತಡೆಯಲು ಡಿಸಿ ರಾತ್ರಿ ಸಂಚಾರವನ್ನು ನಿಷೇಧಿಸಿದ್ದರು.

SCROLL FOR NEXT