ಜಿಲ್ಲಾ ಸುದ್ದಿ

ಭೂ ಪರಭಾರೆ: ಬಿಎಸ್‌ವೈ, ವಿಜಯೇಂದ್ರಗೆ ನೋಟಿಸ್

Lakshmi R

ಬೆಂಗಳೂರು: ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಭೂಮಿ ಪರಭಾರೆ ಮತ್ತು ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಬಂಧಿಸಿದಂತೆ ಸಂಸದ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ಎಸ್.ರಾಘವೇಂದ್ರ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೇನಾಮಿ ಹೆಸರಿನಲ್ಲಿ ಧವಳಗಿರಿ ಪ್ರಾಪರ್ಟೀಸ್ ಸಂಸ್ಥೆಗೆ 58 ಎಕರೆ ಭೂಮಿ ವರ್ಗಾಯಿಸಿಕೊಂಡ ಆರೋಪವನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ವಕೀಲ ವಿನೋದ್ ಎಂಬುವರು ಹೈಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎನ್.ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ ನೋಟಿಸ್ ಜಾರಿ ಮಾಡಿದೆ.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಿವಮೊಗ್ಗ ಹೊರವಲಯದ ಕೋರೆ ಗಂಗೂರು ಪ್ರದೇಶದಲ್ಲಿ 58 ಎಕರೆ ಭೂಮಿಯನ್ನು ರವೀಂದ್ರ ಹಾಗೂ ವಿಜಯನ್ ಎಂಬುವರ ಹೆಸರಿನಲ್ಲಿ ಬೇನಾಮಿಯಾಗಿ ಯಡಿಯೂರಪ್ಪ ಖರೀದಿಸಿದ್ದರೆನ್ನಲಾಗಿದೆ.

ನಂತರ ಅದನ್ನು ಧವಳಗಿರಿ ಪ್ರಾಪರ್ಟೀಸ್ ಸಂಸ್ಥೆಗೆ ವರ್ಗಾಯಿಸಲಾಯಿತು. ಬೇನಾಮಿ ಹೆಸರಿನಲ್ಲಿ 58 ಎಕರೆ ಕೃಷಿ ಭೂಮಿ ಖರೀದಿಸಿ, ಬಳಿಕ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಡುವುದಾಗಿ ತಿಳಿಸಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿದ್ದರು ಎಂದು ಆರೋಪಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ವಕೀಲ ಬಿ.ವಿನೋದ್ ಶಿವಮೊಗ್ಗದ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆದರೆ ದೂರು ದಾಖಲಿಸಲು ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ದೂರನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿನೋದ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಿದ್ದುಪಡಿ ಅರ್ಜಿಗೆ ಸೂಚನೆ: ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ದೂರುದಾರ ವಕೀಲ ಬಿ.ವಿನೋದ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅಕ್ರಮ ಆಸ್ತಿಗಳಿಕೆ ಸಂಬಂಧ ಬಿ.ವೈ.ರಾಘವೇಂದ್ರ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಆದೇಶ ಪ್ರಶ್ನಿಸಿ ತಿದ್ದುಪಡಿ ಅರ್ಜಿ ಸಲ್ಲಿಸಲು ಬಿ.ವೈ.ರಾಘವೇಂದ್ರ ಪರ ವಕೀಲ ಹೈಕೋರ್ಟ್ ಸೂಚಿಸಿತು.

SCROLL FOR NEXT