ಬೆಂಗಳೂರು: ಸಾರಿಗೆ ಸಂಸ್ಥೆ ಮತ್ತು ಆರ್ ಟಿ ಒ ಅಧಿಕಾರಿಗಳು ಬೆಂಗಳೂರಿನ ಟ್ಯಾಕ್ಸಿ ಸೇವೆ ಊಬರ್ ಕಛೇರಿಯ ಮೇಲೆ ಸೋಮವಾರ ದಾಳಿ ನಡೆಸಿದ್ದಾರೆ.
ಸಾರಿಗೆ ಸಂಸ್ಥೆಯ ಜೊತೆ ಈ ಟ್ಯಾಕ್ಸಿ ಸೇವೆಯ ಸಂಸ್ಥೆ ನೊಂದಾಯಿಸಿಕೊಳ್ಳದೆ, ಕಾನೂನು ಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವುದೇ ಈ ದಾಳಿಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಈ ಸಂಸ್ಥೆಯ ಸೇವೆಯನ್ನು ನಿಷೇಧಿಸಿದ್ದರು ಕೂಡ, ಊಬರ್ ಕ್ಯಾಬ್ ಗಳನ್ನು ನಿರ್ವಹಿಸುತ್ತಿದೆ ಎಂದು ಸಾರಿಗೆ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ.
ಊಬರ್ ಕ್ಯಾಬ್ ಚಾಲಕ ದೆಹಲಿಯಲ್ಲಿ ಮಹಿಳೆಯೊಬ್ಬರನ್ನು ರೇಪ್ ಮಾಡಿದ ಹಿನ್ನಲೆಯಲ್ಲಿ, ಈ ಸೇವೆಯನ್ನು ನಿಷೇಧಿಸಲಾಗಿತ್ತು. "ಊಬರ್ ನಗರದಲ್ಲಿ ೩೫೦೦ ಕ್ಯಾಬ್ ಗಳನ್ನು ನಿರ್ವಹಿಸುತ್ತಿದೆ. ಇದು ಅತಿ ದೊಡ್ಡ ಸಂಖ್ಯೆ ಹಾಗೂ ಸಾರಿಗೆ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಇತ್ತೀಚಿಗೆ ನಾವು ಆಯೋಜಿಸಿದ್ದ ಕ್ಯಾಬ್ ನಿರ್ವಾಹಕರ ಸಭೆಗೂ ಅವರು ಬಂದಿಲ್ಲ. ನಿಷೇಧದ ನಂತರವೂ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿರುವದರಿಂದ ನಾವು ಅವರ ಕಛೇರಿ ಮೇಲೆ ದಾಳಿ ನಡೆಸಬೇಕಾಯಿತು. ಅಹಿತಕರ ಘಟನೆಗಳಾದರೆ ಅದಕ್ಕೆ ಹೊಣೆಯಾರು" ಎನ್ನುತ್ತಾರೆ ಗೌಡ.
ದಾಳಿಯ ನಂತರ ರಸ್ತೆ ಸಾರಿಗೆ ಸಂಸ್ಥೆ ವರದಿ ಸಿದ್ಧಪಡಿಸುತ್ತಿದ್ದು, ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ಊಬರ್ ವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಸಾರಿಗೆ ಸಂಸ್ಥೆಯ ಜಂಟಿ ಆಯುಕ್ತ ರವಿಂದರ್ ಹೊಳ್ಕಾರ್ ತಿಳಿಸಿದ್ದಾರೆ.