ಬೆಂಗಳೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾನೆ ಎಂಬ ಶಂಕೆ ಮೇರೆಗೆ ಒಬ್ಬನನ್ನು ಕೊಲೆಗೈದು, ಕಳೇಬರವನ್ನು ನೀರಿನ ಡ್ರಮ್‌ನಲ್ಲಿ ಹಾಕಿ ಮುಚ್ಚಿರುವ ಘಟನೆ ವಿದ್ಯಾರಣ್ಯಪುರ ವಡೇರಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಉತ್ತರಪ್ರದೇಶ ಮೂಲದ ಬ್ರಿಜೇಶ್(24) ಕೊಲೆಯಾದವ. ಆರೋಪಿ ಸಚಿನ್ ಹಾಗೂ ಆತನ ಪತ್ನಿ ಮೇರಿ ತಲೆಮರೆಸಿಕೊಂಡಿದ್ದಾರೆ.
ಸಿದ್ಧ ಉಡುಪುಗಳಿಗೆ ಬಣ್ಣ ಹಾಕುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಬ್ರಿಜೇಶ್ ವಡೇರಹಳ್ಳಿಯಲ್ಲಿ ವಾಸವಿದ್ದ. ಪತ್ನಿ ಉತ್ತರ ಪ್ರದೇಶದಲ್ಲಿ ವಾಸವಿದ್ದಾಳೆ. ಈತ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲೇ ಉತ್ತರಪ್ರದೇಸದ ಮೂಲದ ಮೇರಿ ಎಂಬಾಕೆ ಕಾರ್ಯ ನಿರ್ವಹಿಸುತ್ತಿದ್ದಳು. ಮೇರಿಗೆ ವಿವಾಹವಾಗಿದ್ದು ಪತಿ ಸಚಿನ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ದಂಪತಿ ಕೂಡ ವಡೇರಹಳ್ಳಿಯಲ್ಲಿಯೇ ವಾಸವಿದ್ದರು.
ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಬ್ರಿಜೇಶ್ ಹಾಗೂ ಮೇರಿಗೆ ಪರಿಚಯವಾಗಿತ್ತು. ಮನೆಯಲ್ಲಿ ಸಚಿನ್ ಇಲ್ಲದ ವೇಳೆ ಬರುತ್ತಿದ್ದ ಬ್ರಿಜೇಶ್, ಮೇರಿ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರ ಇತ್ತೀಚೆಗೆ ಸಚಿನ್‌ಗೆ ತಿಳಿದಿತ್ತು. ಮುಂದುವರಿಸದಂತೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದ.
ಬುಧವಾರ ಸಚಿನ್ ಮನೆಗೆ ಬಂದಾಗ ಬ್ರಿಜೇಶ್ ಹಾಗೂ ಮೇರಿ ಇದ್ದರು. ಇದರಿಂದ ಕುಪಿತಗೊಂಡ ಸಚಿನ್, ದೊಣ್ಣೆಯಿಂದ ಬ್ರಿಜೇಶ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಕಿ ಶವವನ್ನು ನೀರು ತುಂಬುವ ಡ್ರಮ್‌ಗೆ ಹಾಕಿ ಮತ್ತೆ ನೀರು ತುಂಬಿ ಸ್ಥಳದಿಂದ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಜೇಶ್ ಹಾಗೂ ಮೇರಿ ಕೆಲಸಕ್ಕೆ ಬಾರದ ಕಾರಣ ಕಾರ್ಖಾನೆ ಮಾಲೀಕ, ಪರೀಶೀಲಿಸಲು ತಾನೇ ಇಬ್ಬರ ಮನೆಗೆ ಹೋಗಿದ್ದ. ಎರಡು ಮನೆಗಳಿಗೂ ಬೀಗ ಹಾಕಲಾಗಿತ್ತು. ಪ್ರವಾಸ ಹೋಗಿರಬಹುದು ಎಂದು ಭಾವಿಸಿದ್ದ. ಆದರೆ, ಶನಿವಾರವೂ ಕೆಲಸಕ್ಕೆ ಬಾರದ ಕಾರಣ ಸಚಿನ್ ಮನೆಗೆ ಹೋಗಿದ್ದ. ಈ ವೇಳೆ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿತ್ತು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನೀರಿನ ಡ್ರಮ್‌ನಲ್ಲಿ ಶವ ಪತ್ತೆಯಾಗಿದೆ.
ಮೇರಿ ಮನೆಗೆ ಬ್ರಿಜೇಶ್ ಆಗಾಗ ಹೋಗುತ್ತಿದ್ದದನ್ನು ಆತನ ಸ್ನೇಹಿತರು ನೋಡಿದ್ದರು. ಕೊಲೆ ನಂತರ ಸಚಿನ್ ಹಾಗೂ ಪತ್ನಿ ಮೇರಿ ನಾಪತ್ತೆಯಾಗಿದ್ದಾರೆ. ಅವರೇ ಕೃತ್ಯ ಎಸಗಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.