ಬೆಂಗಳೂರು: ಡಾ.ರಾಜ್‌ಕುಮಾರ್ ಪುತ್ಥಳಿಗೆ ಬೆಂಕಿ ಇಟ್ಟಿದ್ದ ಐವರು ಕಿಡಿಗೇಡಿಗಳು ಮರುದಿನ ಘಟನೆಯನ್ನು ಖಂಡಿಸಿ, ಆರೋಪಿಗಳನ್ನು ಬಂಧಿಸಿ ಎಂದು ಒತ್ತಾಯಿಸಿದ್ದರು!
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಬಂಧಿತ ಮುತ್ತರಾಜ್ ಅಲಿಯಾಸ್ ಲೊಡ್ಡೆ, ಪ್ರದೀಪ್‌ಕುಮಾರ್ ಅಲಿಯಾಸ್ ಪಚ್ಚಿ, ಚೇತನ್ ಅಲಿಯಾಸ್ ಚೇತು, ರವಿಕಿರಣ್ ಅಲಿಯಾಸ್ ನೈಂಟಿ ಪುಟ್ಟ ಮತ್ತು ಮಂಜುನಾಥ ಅಲಿಯಾಸ್ ಆ್ಯಪಲ್ ಮಂಜನನ್ನು ನ್ಯಾಯಾಲಯಕ್ಕೆ ಹಾಜರಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಹೆಸರು ಇಲ್ಲದ್ದಕ್ಕೆ ಕೋಪ: ಬಂಗಾರಪ್ಪ ನಗರ ಬಸ್ ನಿಲ್ಧಾಣದ ಪಕ್ಕದಲ್ಲೇ ಪ್ರತಿಷ್ಠಾಪಿಸಲಾಗಿದ್ದ ಪುತ್ಥಳಿಯ ಅಧಿಕೃತ ಅನಾವರಣ ಕಾರ್ಯಕ್ರಮವನ್ನು ನ.23ಕ್ಕೆ ನಿಗದಿ ಪಡಿಸಲಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಮೋಹನ್‌ಕುಮಾರ್ ಎಂಬುವರ ಹೆಸರಿನ ಜತೆಗೆ ಫೋಟೋ ಮುದ್ರಿಸಲಾಗಿತ್ತು.
ಆದರೆ ಪುತ್ಥಳಿ ಪ್ರತಿಷ್ಠಾಪನೆಗೆ 2 ತಿಂಗಳಿಂದ ದುಡಿದವರ ಹೆಸರುಗಳನ್ನು ಹಾಕಲಿಲ್ಲವೆಂದು ಆರೋಪಿಗಳು ಬೇಸರಗೊಂಡಿದ್ದರು. ಅಲ್ಲದೆ ಪುತ್ಥಳಿ ಮಾಡಿಸಿಕೊಟ್ಟಿದ್ದ ಶ್ರೀನಿವಾಸ್, ಬೇರೆ ಕಡೆಯಿಂದ ಬಂದು ಡಾ.ರಾಜ್‌ಕುಮಾರ್ ಸೇವಾ ಸಮಿತಿ ಸ್ಥಾಪಿಸಿಕೊಂಡು ಸ್ಥಳೀಯವಾಗಿ ನಾಯಕನಾಗುತ್ತಿದ್ದಾನೆ, ಹೀಗಾಗಿ ಕಾರ್ಯಕ್ರಮ ನೆರವೇರಲು ಬಿಡಬಾರದೆಂದು ಆರೋಪಿಗಳು ನಿರ್ಧರಿಸಿದ್ದರು.
ನ.12ರಂದು ಪುತ್ಥಳಿ ಪ್ರತಿಷ್ಠಾಪಿಸಿದ್ದರು. ರಾತ್ರಿ ಎಲ್ಲರೂ ಹೋದ ನಂತರ ಪಕ್ಕದಲ್ಲೇ ಕುಳಿತು ಮದ್ಯಪಾನ ಮಾಡಿದ್ದರು. ಮುಂಜಾನೆ 3 ಗಂಟೆಗೆ ಪುತ್ಥಳಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದರು. ಬೆಳಗ್ಗೆ ಪುತ್ಥಳಿ ಬಳಿ ಬಂದು ಜೋರು ಪ್ರತಿಭಟನೆ ನಡೆಸಿದ್ದರು. ಈ ಮೂಲಕ ತಮ್ಮ ಮೇಲೆ ಯಾರಿಗೂ ಅನುಮಾನ ಬರಬಾರದೆಂದು ಯೋಜಿಸಿದ್ದರು.
ಸ್ಥಳೀಯರು ಹಾಗೂ ಪುತ್ಥಳಿ ಸ್ಥಾಪನೆಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ವಿಚಾರಿಸಿದಾಗ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಇಟ್ಟಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲಿ ಈ ಕೃತ್ಯ ನಡೆದಿಲ್ಲ ಎಂದು ಆಯುಕ್ತ ಎಂ.ಎನ್ ರೆಡ್ಡಿ ಸ್ಪಷ್ಟಪಡಿಸಿದರು. ಬಂಧಿತ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ತೆರೆಯುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.