ಜಿಲ್ಲಾ ಸುದ್ದಿ

ಶೌಚಾಲಯಗಳೇ ಇಲ್ಲದ 'ನಮ್ಮ ಮೆಟ್ರೊ'

Lakshmi R

ಬೆಂಗಳೂರು: ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿರುವ ಬೆಂಗಳೂರಿನ ನಮ್ಮ ಮೆಟ್ರೋನಲ್ಲಿ ಮೂಲಭೂತ ಸೌಲಭ್ಯಗಳು ಸ್ಥಳೀಯ ಪ್ರಯಾಣಿಕರು ಮಾತ್ರವಲ್ಲ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೊ ನಿಲ್ದಾಣಗಳಲ್ಲಿ ನಾನಾ ಬಗೆಯ ಸವಲತ್ತುಗಳನ್ನು ಒದಗಿಸಲಾಗಿದೆ.

ಆದರೆ ಮೆಟ್ರೋ ಸೇವೆಗೆ ಚ್ಯುತಿತರುವಂತಹ ದುರಾದೃಷ್ಟಕರ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿಶ್ವ ಶೌಚಾಲಯದ ದಿನದಂದು ವಿಶೇಷ ಸಮೀಕ್ಷೆ ನಡೆಸಿದಾಗ ನಮ್ಮ ಮೆಟ್ರೋ ಸ್ಟೇಷನ್‌ಗಳ ಪೈಕಿ 2 ನಿಲ್ದಾಣಗಳನ್ನು ಹೊರತು ಪಡಿಸಿದರೆ, ಮತ್ತೆ ಯಾವ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಗಯಗಳೇ ಇಲ್ಲ.

ವಿಶ್ವ ಶೌಚಾಲಯದ ದಿನದ ಅಂಗವಾಗಿ ಸಂಪಿಗೆ ರಸ್ತೆಯಿಂದ ಪೀಣ್ಯ ಕೈಗಾರಿಕಾ ವಲಯ ಮಾರ್ಗಗಳಲ್ಲಿ ರಿಯಾಲಿಟಿ ಚೆಕ್ ನಡೆಸಲಾಗಿತ್ತು. ಈ ಎರಡು ಮಾರ್ಗಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸಂಪಿಗೆ ರಸ್ತೆಯಿಂದ ಪೀಣ್ಯ ಕೈಗಾರಿಕಾ ವಲಯ ಮಾರ್ಗದ 10 ನಿಲ್ದಾಣಗಳಲ್ಲೂ ಶೌಚಾಲಯಗಳೇ ಇಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಇನ್ನು ಎಂ.ಜಿ.ರಸ್ತೆ ಯಿಂದ ಬೈಯಪ್ಪನಹಳ್ಳಿಯ ಮಾರ್ಗದಲ್ಲಿ 2 ನಿಲ್ದಾಣಗಳನ್ನು ಹೊರತುಪಡಿಸಿದರೆ ಮತ್ತೆ ಯಾವ ನಿಲ್ದಾಣಗಳಲ್ಲೂ ಶೌಚಾಲಯಗಳೇ ಇಲ್ಲ.

ಇನ್ನು ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ವೀಕ್ಷಿಸಿದಾಗ, 2 ನಿಲ್ದಾಣಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆಯಿದೆ. ಆದರೆ ಈ ಶೌಚಾಲಯಗಳೂ ಉಪಯೋಗಕ್ಕೆ ಬಾರದಷ್ಟು ಗಬ್ಬೆದ್ದು ನಾರುತ್ತಿವೆ. ಅದರಲ್ಲೂ ಮತ್ತೊಂದು ನಿಲ್ದಾಣದಲ್ಲಿನ ಶೌಚಾಲಯ ಅನಾನುಕೂಲಕರವಾದ ಸ್ಥಳದಲ್ಲಿ ನಿರ್ಮಿಸಲಾಗಿದ್ದು, ಉಪಯೋಗಿಕ್ಕೆ ಬಾರದಂತಾಗಿದೆ.

ಶೌಚಾಲಯ ಎಲ್ಲಿದೆ ಎಂದು ಯಾರಾದರೂ ಮೆಟ್ರೋ ನಿಲ್ದಾಣದ ಬಳಿಯಿರುವ ಸೆಕ್ಯುರಿಟಿ ಗಾರ್ಡ್‌ಗಳ ಬಳಿ ಪ್ರಶ್ನೆ ಕೇಳಿದರೆ, ಉತ್ತರಿಸಲು ಕೆಲ ಕ್ಷಣ ತಬ್ಬಿಬ್ಬಾಗುತ್ತಾರೆ. ಮಂತ್ರಿ ಸ್ಕ್ವೇರ್ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್‌ಗಳನ್ನು ಪ್ರಶ್ನಿಸಿದಾಗ, ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ ಎಂದು ಮಾಲ್‌ನಲ್ಲಿರುವ ಶೌಚಾಲಯದತ್ತ ದಾರಿ ತೋರಿಸುತ್ತಾರೆ.

ಇದೇ ರೀತಿ, ಕುವೆಂಪು ರಸ್ತೆ ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್‌ಗಳ ಬಳಿ ಶೌಚಾಲಯಕ್ಕೆ ದಾರಿ ಕೇಳಿದಾಗ, ಕೆಂಡಾಮಂಡಲಾದರು. 'ಈ ಕುರಿತು ತಮ್ಮ ಮಾಲೀಕರ ಗಮನಕ್ಕೆ ತರುತ್ತೇವೆ, ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ ಎಂಬ ಬೋರ್ಡ್‌ನ್ನು ಹಾಕುವಂತೆ ಹೇಳುತ್ತೇನೆ' ಎಂದು ಉತ್ತರಿಸಿದರು.

ಹೀಗೆ ಪ್ರತಿಯೊಂದು ನಿಲ್ದಾಣಗಳಲ್ಲೂ ಸೆಕ್ಯೂರಿಟಿ ಗಾರ್ಡ್‌ಗಳು ಅಸಹಾಯಕ ಉತ್ತರ ನೀಡುತ್ತಾರೆ. ಮೂತ್ರ ವಿಸರ್ಜನೆಗೆಂದು ಪರದಾಡುವ ಹಲವಾರು ಪ್ರಯಾಣಿಕರು ಇಂತಹ ಉತ್ತರ ಕೇಳಿ ಸುಮ್ಮನಾಗುತ್ತಾರೆ.

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಮೆಟ್ರೋ ಸೇವೆ ಪಡೆಯುತ್ತಿದ್ದು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರೀಕರು ಸೇರಿದಂತೆ ಹಲವರು ಮೆಟ್ರೋವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನು ಸದ್ಯಕ್ಕೆ ಇರುವ 2 ನಿಲ್ದಾಣಗಳಲ್ಲಿನ ಶೌಚಾಲಯಗಳು ಭೂಲೋಕದ ನರಕವೇ ಸರಿ. ಉಪಯೋಗಕ್ಕೆ ಬಾರದಷ್ಟು ಗಬ್ಬೆದ್ದು ನಾರುತ್ತಿವೆ. ಶುಚಿತ್ವದ ಕೊರತೆ ಎದ್ದು ಕಾಣುತ್ತಿದ್ದು, ಇದರ ಸಮಸ್ಯೆಗಳನ್ನು ಹೇಳತೀರದಾಗಿದೆ.

ಕೂಡಲೇ ಈ ಕುರಿತು ಮೆಟ್ರೋ ಅಧಿಕಾರಿಗಳು ಶೌಚಾಲಯ ನಿರ್ಮಾಣದ ಕುರಿತು ಗಮನಹರಿಸಬೇಕಾಗಿದೆ ಎಂದು ಮೆಟ್ರೋ ಪ್ರಯಾಣಿಕರು ಆಗ್ರಹಿಸಿದ್ದಾರೆ.

SCROLL FOR NEXT