ಕಿಸ್ ಆಫ್ ಲವ್ ಅಭಿಯಾನ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸರ್ಕಾರಕ್ಕೆ ಚುಂ'ಬಣ'ದ ಇಕ್ಕಟ್ಟು

ವಿವಾದಿತ ಕಿಸ್ ಆಫ್ ಲವ್‌ಗೆ ರಾಜ್ಯದ ಕೆಲ ಸಚಿವರಿಂದಲೇ ಭಾರಿ ವಿರೋಧ ವ್ಯಕ್ತವಾಗಲಾರಂಭಿಸಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಬೆಂಗಳೂರು: ವಿವಾದಿತ ಕಿಸ್ ಆಫ್ ಲವ್‌ಗೆ ರಾಜ್ಯದ ಕೆಲ ಸಚಿವರಿಂದಲೇ ಭಾರಿ ವಿರೋಧ ವ್ಯಕ್ತವಾಗಲಾರಂಭಿಸಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೋ ಇಲ್ಲವೋ ಎಂಬುದು ಮಂಗಳವಾರ ಅಧಿಕೃತಗೊಳ್ಳಲಿದೆ.

ಕುತೂಹಲಕಾರಿ ಸಂಗತಿ ಎಂದರೆ, ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಬಲವಾದ ಆಗ್ರಹ ಕಾಂಗ್ರೆಸ್ ವಲಯದಲ್ಲೇ ವ್ಯಕ್ತವಾಗಿದೆ. ನಾಡಿನ ಸಂಸ್ಕೃತಿ ರಕ್ಷಣೆ ದೃಷ್ಟಿಯಿಂದ ಅವಕಾಶ ನೀಡಬಾರದು ಎಂದು ಐದಕ್ಕೂ ಹೆಚ್ಚು ಸಚಿವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಕನ್ನಡ-ಸಂಸ್ಕೃತಿ  ಸಚಿನೆ ಉಮಾಶ್ರೀ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಇಂಧನ ಸಚಿವ ಡಿಕೆ ಶಿವಕುಮಾರ್ ಮೊದಲಾದವರು ಬಹಿರಂಗವಾಗಿಯೇ ಸಂಸ್ಕೃತಿಯ ರಕ್ಷಣೆ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ಕಾರ್ಯಕ್ರಮದ ಆಯೋಜಕಿ ರಚಿತಾ ತನೇಜಾ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಕಾರ್ಯಕ್ರಮ ನಡೆಯುತ್ತದೆ, ನವೆಂಬರ್ 30ರಂದು 250ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ ಎಂದು ಪ್ರಕಟಿಸಿದ್ದಾರೆ.

ಇಂದು ನಿರ್ಧಾರ
ವಿವಾದ ದಿನದಿಂದ ದಿನಕ್ಕೆ ಬಿಸಿಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೋ ಬೇಡವೋ ಎಂಬ ಬಗ್ಗೆ ಇಂದು ಅಧಿಕೃತ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಆಯೋಜಕರಿಂದ ನಾವು ಪ್ರತಿಕ್ರಿಯೆ ಪಡೆದಿದ್ದೇವೆ. ಕಾರ್ಯಕ್ರಮವನ್ನು ಏಕೆ ನಡೆಸುತ್ತಿದ್ದೀರಿ, ಅದರ ಸ್ವರೂಪವೇನು ಎಂಬ ಪ್ರಶ್ನೆ ಕೇಳಿದ್ದೆವು.

ಅವರು ಅದಕ್ಕೆ ವಿವರಣೆ ನೀಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಘಟನೆಗಳಿಂದಲೂ ವಿವರಣೆ ಪಡೆದಿದ್ದೇವೆ. ಅನುಮತಿ ನೀಡಬೇಕೋ ಬೇಡವೋ ಎಂಬ ಬಗ್ಗೆ ಮಂಗಳವಾರ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದರು. ಈ ಹಿನ್ನಲೆಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಯಾರಿಗೂ ಅವಕಾಶ ನೀಡುವುದಿಲ್ಲ. ಯಾರಾದರೂ ಅಂತಹ ಕೃತ್ಯಕ್ಕೆ ಮುಂದಾದರೆ ನಾವು ಕ್ರಮ ಕೈ ತೆಗೆದುಕೊಳ್ಳುತ್ತೇವೆ ಎಂದರು.

ನೈತಿಕ ಪೊಲೀಸ್ ಇಲ್ಲ
ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಇಂಧನ ಸಚಿವ ಡಿಕೆ ಶಿವಕುಮಾರ್ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿಲ್ಲ. ಹೀಗಾಗಿ ರಾಜ್ಯದ ಯುವಕರು ನಮ್ಮ ಸಂಸ್ಕೃತಿಗೆ ಧಕ್ಕೆ ತರುವಂತಹ ಕಾರ್ಯಕ್ರಮಕ್ಕೆ ಮುಂದಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದ ಕಾನೂನಿಗೆ ಎಲ್ಲರೂ ಗೌರವ ನೀಡಬೇಕು. ಈ ಬಗ್ಗೆ ಅಧಿಕೃತ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆಜೆ ಜಾರ್ಜ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ರೀತಿ ಅಭಿಪ್ರಾಯವ್ಯಕ್ತಪಡಿಸಿರುವ ಸಚಿವ ರಾಮಲಿಂಗಾ ರೆಡ್ಡಿ, ಸಂಸ್ಕೃತಿ ರಕ್ಷಣೆ ದೃಷ್ಟಿಯಿಂದ ಇಂಥವಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ. ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಗೃಹ ಸಚಿವರಿಗೆ ಪತ್ರ ಬರೆದು ಕಿಸ್ ಆಫ್ ಲವ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ನಾಡಿನ ಸಂಸ್ಕೃತಿಗೆ ಇದರಿಂದ ಧಕ್ಕೆಯಾಗುವುದರ ಜತೆಗೆ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತದೆ ಎಂದಿದ್ದಾರೆ.

ಪೂಜಾರಿ ಒತ್ತಾಯ
ಏತನ್ಮಧ್ಯೆ, ಕಿಸ್ ಆಫ್ ಲವ್ ಎಂಬ ಅಶ್ಲೀಲ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬಾರದು. ಸಾರ್ವಜನಿಕವಾಗಿ ಕಿಸ್ ಕೊಡುವವರನ್ನು ಬಂಧಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಒತ್ತಾಯಿಸಿದ್ದಾರೆ. ಮುತ್ತು ಕೊಡುವ ಇಂತಹ ಕಾರ್ಯಕ್ರಮ ನಡೆಸುವುದರಿಂದ ಶಾಲೆ, ಕಾಲೇಜು, ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಈ ರೀತಿ ಅಶ್ಲೀಲವಾಗಿ ವರ್ತಿಸುವವರಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಹೇಳಿದರು. ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕಿಸ್ ಆಫ್ ಲವ್ ಡೇ ಆಯೋಜಿಸುವುದು ಅತಿರೇಕ ವಿರೋಧಿಸಲು ಇನ್ನೊಂದು ಅತಿರೇಕ ಮಾಡಿದಂತೆ ಎಂದು ವಿಶ್ಲೇಷಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT