ಬೆಂಗಳೂರು: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ(ಎಲ್‌ಸಿಎ) 'ತೇಜಸ್'ನ ಮಾಜಿ ಯೋಜನಾ ನಿರ್ದೇಶಕ, ಏರ್ ಕಮೋಡರ್ ಪವೇಜ್ ಖೋಕರ್(70) ಅವರನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.
ನಗರ ಹೊರವಲಯದ ಹುಸ್ಕೂರಿನಲ್ಲಿರುವ ಕಾಫಿ ಪ್ಲಾಂಟೇಷನ್‌ನ ವಿಲ್ಲಾದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಮಲಗುವ ಕೊಠಡಿಯಲ್ಲಿ ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಯಥಾಸ್ಥಿತಿಯಲ್ಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖೋಕರ್ ದಂಪತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುತ್ತಿದ್ದರು. ಬೆಳಗ್ಗೆ 7.30ಕ್ಕೆ ಎಚ್ಚರಗೊಂಡ ಖೋಕರ್ ಪತ್ನಿ ಪ್ರಮೀಳಾ, ಕೊಠಡಿಯಲ್ಲಿ ಹೊರ ಬರಲು ಮುಂದಾದಾಗ ಬಾಗಿಲಿನ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಹೀಗಾಗಿ ಪತಿಗೆ ಕರೆ ಮಾಡಿದ್ದಾರೆ. ಅಲ್ಲಿಂದಲೂ ಪ್ರತಿಕ್ರಿಯೆ ಬಾರದ ಕಾರಣ ನೆರೆಮನೆಯವರಿಗೆ ಕರೆ ಮಾಡಿದ್ದಾರೆ. ನೆರೆಮನೆಯವರು ಮನೆಯ ಹಿಂಭಾಗದ ಬಾಲ್ಕನಿಯಿಂದ ಒಳಗೆ ಬಂದು ಪ್ರಮೀಳಾ ಅವರ ಕೊಠಡಿ ಬಾಗಿಲು ತೆಗೆದಿದ್ದಾರೆ. ಪವೇಜ್ ಖೋಕರ್ ಕೊಠಡಿಗೂ ಚಿಲಕ ಹಾಕಲಾಗಿತ್ತು. ಚಿಲಕ ತೆಗೆದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ಕೃತ್ಯ?: ವಿಲ್ಲಾಗೆ ನೆಲಮಳಿಗೆಯಲ್ಲಿ 2 ಬಾಗಿಲು ಹಾಗೂ ಮೊದಲನೇ ಮಹಡಿಯಲ್ಲಿ ಎರಡು ಬಾಗಿಲುಗಳಿವೆ. ತಲಾ 2 ಬೆಡ್ ರೂಮ್‌ಗಳಿವೆ. ರಾತ್ರಿ 9.30ಕ್ಕೆ ಪತಿ ಕೊಠಡಿಗೆ ಹೋಗಿದ್ದಾರೆ. ತಾನು 11 ಗಂಟೆಗೆ ಮಲಗಲು ಹೋಗಿದ್ದಾಗಿ ಪ್ರಮೀಳಾ ತಿಳಿಸಿದ್ದಾರೆ. ಮಧ್ಯರಾತ್ರಿ 12 ರಿಂದ 1 ಗಂಟೆ ನಡುವೆ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ದಂಪತಿ ಕಳೆದ ಆರು ವರ್ಷಗಳಿಂದ ವಿಲ್ಲಾದಲ್ಲಿ ವಾಸವಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ದುಷ್ಕರ್ಮಿಗಳು ಮಧ್ಯರಾತ್ರಿ 12ರಿಂದ 1 ಗಂಟೆ ನಡುವೆ ಕೃತ್ಯ ಎಸಗಿರುವ ಶಂಕೆ ಇದೆ. ಮನೆಯ ಹಿಂಭಾಗದ ಬಾಲ್ಕನಿ ಮೂಲಕವೇ ದುಷ್ಕರ್ಮಿಗಳು ಪ್ರವೇಶಿಸಿರುವ ಸಾಧ್ಯತೆ ಇದೆ. ಮನೆಯಲ್ಲಿ ಯಾವುದೇ ವಸ್ತು ಕಾಣೆಯಾಗಿಲ್ಲ. ಪ್ರಕರಣ ನಿಗೂಢವಾಗಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ.
-ಬಿ. ರಮೇಶ್, ಎಸ್ಪಿ, ಬೆಂಗಳೂರು ಗ್ರಾಮಾಂತರ
ಅಪ್ರತಿಮ ಸಾಧಕ
ವಾಯುಸೇನೆಯಲ್ಲಿ ಎ ದರ್ಜೆ ಫೈಟರ್ ವಿಮಾನ ಹಾರಾಟ ತರಬೇತುದಾರ
1968-2003ವರೆಗೆ 35 ವರ್ಷಗಳ ಕಾಲ ಭಾರತೀಯ ವಾಯುಸೇನೆಯಲ್ಲಿ ಸೇವೆ
ರಫಾಲೆ, ಎಫ್-18, ಸುಖೋಯ್, ಮಿಗ್ ಸರಣಿ ವಿಮಾನ ಸೇರಿ 63 ಬಗೆಯ ವಿಮಾನಗಳ ಹಾರಾಟ
5 ಸಾವಿರ ತಾಸು ಅಪಘಾತ ರಹಿತ ವಿಮಾನ ಹಾರಾಟ
ಯುದ್ಧಗಳಲ್ಲಿ ಫೈಟರ್ ವಿಮಾನದ ಪೈಲಟ್
ರಕ್ಷಣಾ ಅಧ್ಯಯನದ ಬಗ್ಗೆ ಸ್ನಾತಕೋತ್ತರ ಮಟ್ಟದ ಬೋಧನೆ
ಪಾಕಿಸ್ತಾನದಲ್ಲಿ 4 ವರ್ಷದ ಯೋಧ ರಾಯಭಾರಿ, ಇರಾಕ್-ಇರಾನ್ ಯುದ್ಧದಲ್ಲಿ ಇರಾಕ್ ವಾಯುಪಡೆ ಪರವಾಗಿ 2 ವರ್ಷ ಸೇವೆ
ನ್ಯೂಜಿಲೆಂಡ್, ಅಮೆರಿಕಾ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಧ್ಯಯನ, ತರಬೇತಿ, ಬೋಧನೆ