ಬೆಂಗಳೂರು: ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳುವ ಸರ್ಕಾರ, ಕಳಂಕಿತ ಅಧಿಕಾರಿಗಳಿಗೆ 'ಐಎಎಸ್' ಹಂತಕ್ಕೆ ಬಡ್ತಿ ನೀಡಲು ಮುಂದಾಗಿದೆ!
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಹತ್ತಿರದ ಸಂಬಂಧಿ ಎನ್ನುವ ಒಂದೇ ಕಾರಣಕ್ಕೆ ಇಲಾಖೆಯಲ್ಲಿ ಸಾಕಷ್ಟು ಆರೋಪಗಳನ್ನು ಹೊಂದಿದ್ದರೂ ನಿಯಮ ಬಾಹಿರವಾಗಿ ಅಬಕಾರಿ ಇಲಾಖೆಯ ಉಪ ಆಯುಕ್ತ ಡಾ.ವೈ.ಮಂಜುನಾಥ್ ಅವರನ್ನು ಐಎಎಸ್ ಅಧಿಕಾರಿಯಾಗಿ ಬಡ್ತಿ ನೀಡುವಂತೆ ಕೇಂದ್ರ ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.
ಹಣಕಾಸು ಇಲಾಖೆ ಹಾಗೂ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ವಿರೋಧವಿದ್ದರೂ ಮಂಜುನಾಥ್‌ರಿಗೆ ಸರ್ಕಾರ ದೊಡ್ಡ 'ಕಾಣಿಕೆ' ನೀಡಲು ಮುಂದಾಗಿದೆ. ಇಲಾಖೆಯಲ್ಲಿ ಅಲ್ಲದೆ, ಮದ್ಯದಂಗಡಿ ಮಾಲೀಕರಿಗೂ ಕಿರುಕುಳ ನೀಡದ ಆರೋಪವಿದೆ. ಅಂಗಡಿ ನವೀಕರಣಕ್ಕೆ ಲಂಚ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
11 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಜಾಮೀನು ಪಡೆದು ಹೊರಬಂದಿದ್ದರು. ಈ ಸಂದರ್ಭದಲ್ಲಿ ಸರ್ಕಾರದಿಂದ ಅಮಾನತು ಶಿಕ್ಷೆಗೂ ಮಂಜುನಾಥ್ ಒಳಗಾಗಿದ್ದರು. ಆದರೆ, ಸತೀಶ್ ಜಾರಕಿಹೊಳಿ ಅವರ ಪ್ರಭಾವದಿಂದ ಬಡ್ತಿಯೊಂದಿಗೆ ಬೆಂಗಳೂರು ದಕ್ಷಿಣ ನಂತರ ಬೆಳಗಾವಿ ವಿಭಾಗದ ಉಪ ಆಯುಕ್ತರಾಗಿ ಮಂಜುನಾಥ್ ನೇಮಕೊಂಡರು.
ಅವರ ವಿರುದ್ಧದ ಆರೋಪಗಳ ವಿಚಾರಣೆ ಬಾಕಿ ಇರುವಾಗ ಹಾಗೂ ಇಲಾಖೆಯಲ್ಲಿ ವಿರೋಧಗಳಿರುವಾಗಲೇ ಕೇಂದ್ರ ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಇದನ್ನು ಸರ್ಕಾರದ ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಖಾತ್ರಿಪಡಿಸಿವೆ.
ಪ್ರಮಾಣಿಕರಿಗೆ ವರ್ಗಾವಣೆ ಶಿಕ್ಷೆ ವಿಧಿಸುವ ಸರ್ಕಾರ, ಮಂಜುನಾಥ್ ಮೇಲೆ ಆರೋಪಗಳು ಬಂದಾಗಲೆಲ್ಲ ಉತ್ತಮ ಹುದ್ದೆಗಳನ್ನು ನೀಡಿ ವರ್ಗ ಮಾಡಿದೆ. ಈ ಕುರಿತಂತೆ ಸಚಿವ ಜಾರಕಿಹೊಳಿ ಅವರನ್ನು ಪ್ರಶ್ನಿಸಿದಾಗ, 'ಸರ್ಕಾರದ ಸಾಮಾನ್ಯ ವರ್ಗಾವಣೆಯಲ್ಲಿ ಅವರ ಹೆಸರೂ ಬಂದಿದೆ' ಎಂದು ಕೈ ತೊಳೆದುಕೊಂಡಿದ್ದರು.
ಆದರೆ ಕಳಂಕಿತ ಅಧಿಕಾರಿಯನ್ನು ಐಎಎಸ್ ಶ್ರೇಣಿಗೆ ಬಡ್ತಿ ನೀಡುವಂತೆ ಯುಪಿಎಸ್‌ಸಿಗೆ ಶಿಫಾರಸು ಮಾಡಲು ಅಬಕಾರಿ ಸಚಿವ ಹಾಗೂ ಸಂಬಂಧಿ ಜಾರಕಿಹೊಳಿಯಲ್ಲದೇ ಮತ್ಯಾರು ಕಾರಣರಾಗಲು ಸಾಧ್ಯ? ಎಂದು ಇಲಾಖೆ ಅಧಿಕಾರಿಗಳೇ ಪ್ರಶ್ನಿಸುತ್ತಿದ್ದಾರೆ.
ಇದು ಹೊಸತಲ್ಲ
ಈ ಹಿಂದೆ ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರನ್ನು ಇದೇ ಸರ್ಕಾರ ಐಎಎಸ್ ಶ್ರೇಣಿಗೆ ಬಡ್ತಿ ನೀಡಲು ಮುಂದಾಗಿತ್ತು. ಆ ಅಧಿಕಾರಿ ವಿರುದ್ಧ ಸಾಕಷ್ಟು ಆರೋಪಗಳಿದ್ದರೂ ಸರ್ಕಾರ ಕ್ಯಾರೇ ಎನ್ನಲಿಲ್ಲ. ಮೂಲತಃ ಆ ಅಧಿಕಾರಿಗೆ ಕೆಎಎಸ್ ಕೂಡ ಆಗಿರಲಿಲ್ಲ. ಯುಪಿಎಸ್‌ಸಿಗೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಯ ಕರ್ಮಕಾಂಡಗಳ ದೂರು ಸಲ್ಲಿಕೆಯಾದ ಮೇಲೆ ಸರ್ಕಾರ ಹಿಂದೆ ಸರಿದಿತ್ತು.