ಜಿಲ್ಲಾ ಸುದ್ದಿ

ದಲಿತ, ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಒತ್ತಾಯ

ಬೆಂಗಳೂರು: ಕೇಂದ್ರ ಸರ್ಕಾರ ಕೃಷಿ ಕೂಲಿಕಾರರು, ದಲಿತ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಭೂಸ್ವಾಧೀನ ಮಸೂದೆ ವಿರೋಧಿ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಪುರಭವನದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, `ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬಾರದು. ರೈತ ಪರ ಸಮಗ್ರ ಕೃಷಿ ಹಾಗೂ ಸಾಲದ ನೀತಿ ರೂಪಿಸಿ ಅವರು ಗುಳೆ ಹೋಗುವುದನ್ನು ತಪ್ಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವಂತೆ ವೇತನ ಆಯೋಗ ಜಾರಿಗೆ ತರಬೇಕು' ಎಂದು ಆಗ್ರಹಿಸಿದರು.

ಗ್ರಾಪಂಗಳನ್ನು ಸರ್ಕಾರ ಎಂದು ಘೋಷಿಸಿ ಆರ್ಥಿಕ ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕು. ದುಡಿಯುವ ಮಹಿಳೆಯರ ಆರೋಗ್ಯ ರಕ್ಷಣೆಗೆ ಹೆಲ್ತ್ ಕಾರ್ಡ್ ಕೊಡುವ ನೀತಿ ಜಾರಿಗೆ ತರಬೇಕು. ಬಿಜೆಪಿ ಲೋಕಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಡಾ. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಲು ಬದ್ಧವಾಗಿರಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ, ಹಸಿರು ಸೇನೆ, ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ ಸೇರಿದಂತೆ ವಿವಿಧ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೈತ ಮುಖಂಡರಾದ ಚಾಮರಸ ಮಾಲಿ ಪಾಟೀಲ, ಮಾರುತಿ ಮಾನ್ಪಡೆ, ಮಾವಳ್ಳಿ ಶಂಕರ್, ಬಡಗಲಪುರ ನಾಗೇಂದ್ರ ಮತ್ತಿತರರು ಇದ್ದರು.

SCROLL FOR NEXT