ಬೆಂಗಳೂರು: ಬಿಬಿಎಂಪಿಯಲ್ಲಿ 2008ರ ನಂತರ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಠಾರಿಯಾ ಏಕಸದಸ್ಯ ಸಮಿತಿ ನೀಡಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ಎಲ್ಲ ರೀತಿಯ ಕಾಮಗಾರಿಗಳ ತನಿಖೆ ನಡೆಸಲು ಸಿಐಡಿಗೆ ಸೂಚಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ತ್ಯಾಜ್ಯ ನಿರ್ವಹಣೆ, ಸ್ವತ್ತುಗಳ ವಿವರ ಇಲ್ಲದಿರುವುದು, ಜಾಹೀರಾತು, ಖಾತಾ ನೀಡಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸಮಿತಿ ಅಕ್ರಮಗಳ ಸಂಬಂಧ ರಾಜೇಂದ್ರಕುಮಾರ್ ಕಠಾರಿಯಾ ಸಮಿತಿ ವರದಿ ಸಲ್ಲಿಸಿತ್ತು.
ಈ ಬಗ್ಗೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ನಗರಾಭಿವೃದ್ಧಿ ಇಲಾಖೆ ಪಾಲಿಕೆ ಸದಸ್ಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಬಗ್ಗೆ ಉತ್ತರಿಸಲು ಮಾ.31ರ ಗಡುವು ನೀಡಲಾಗಿತ್ತು. ಆದರೆ, ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಉತ್ತರಿಸಲು ಸಮಯಾವಕಾಶ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಎಷ್ಟು ಸಮಯಬೇಕೆಂದು ನಿರ್ಣಯದಲ್ಲಿ ಸ್ಪಷ್ಟವಾಗಿರಲಿಲ್ಲ. ಹೀಗಾಗಿ, ಸರ್ಕಾರ ಅವ್ಯವಹಾರದ ತನಿಖೆಯನ್ನು ಸಿಐಡಿಗೆ ವಹಿಸಲು ಮುಂದಾಗಿದೆ.
ಸಮಿತಿ ನೀಡಿರುವ ವರದಿ ಪ್ರಕಾರ ಬಿಬಿಎಂಪಿಯಲ್ಲಿ ರು.1ಸಾವಿರ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ. ಆಸ್ತಿ ತೆರಿಗೆಯಿಂದ ಆರಂಭವಾಗಿ ಲೆಕ್ಕಪತ್ರವಿಭಾಗ, ಜಾಹೀರಾತು, ತ್ಯಾಜ್ಯ ನಿರ್ವಹಣೆ, ಖಾತಾ ನೀಡುವುದು, ಓಎಫ್ ಸಿ ಅಳವಡಿಕೆ, ಕೆಆರ್‍ಐಡಿಎಲ್‍ಗೆ ಕಾಮಗಾರಿ ವಹಿಸಿರುವುದು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೋಟ್ಯಂತರ ಮೊತ್ತದ ನಷ್ಟವಾಗಿದೆ.