ಬೆಂಗಳೂರು: ಪ್ರಗತಿ ಕಾಲೇಜು ವಿದ್ಯಾರ್ಥಿನಿ ಗೌತಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹೇಶ್ ನಕ್ಸಲೀಯರೊಂದಿಗೆ ಸಂಪರ್ಕ ಹೊಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ವಿದ್ಯಾರ್ಥಿನಿ ಗೌತಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಶಿವಮೊಗ್ಗಕ್ಕೆ ತೆರಳಿದ್ದ ಮಹೇಶ್ ಪೊಲೀಸರ ತನಿಖೆ ವೇಳೆ ನಕ್ಸಲ್ ಸಂಪರ್ಕದ ಕುರಿತಂತೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಮಹೇಶ್ ಹಲವು ವರ್ಷಗಳ ಹಿಂದೆಯೇ ಬಂದೂಕು ಚಲಾಯಿಸುವ ಬಗ್ಗೆ ತರಬೇತಿ ಪಡೆದಿರುವ ಕುರಿತು ಪೊಲೀಸರು ಮಾಹಿತಿ ಕಲೆಹಾಕಿದ್ದು, ಮಹೇಶ್ ನ ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ನಕ್ಸಲೀಯರ ಜತೆ ಈತ ಬಂದೂಕು ಚಲಾಯಿಸುವ ಬಗ್ಗೆ ತರಬೇತಿ ಪಡೆದಿದ್ದ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ತನ್ನ ಹುಟ್ಟೂರಾದ ಕೆಂದಾಳುಬೈಲಿನಲ್ಲಿದ್ದ ವೇಳೆ ಈತ ನಕ್ಸಲೀಯರ ಜತೆ ಸಂಪರ್ಕ ಹೊಂದಿದ್ದನು. ಬಂದೂಕು, ಮದ್ದುಗುಂಡುಗಳ ಸ್ಫೋಟ, ಶಸ್ತ್ರಾಸ್ತ್ರಗಳ ಬಳಕೆ ಮಾಡುವುದರ ಬಗ್ಗೆ
ನಕ್ಸಲೀಯರಿಂದ ತರಬೇತಿ ಪಡೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಬಂಧಿತ ಮಹೇಶ್‌ನಿಂದ ಪೊಲೀಸರು ವಶಪಡಿಸಿಕೊಂಡಿರುವ 9ಎಂಎಂ ಪಿಸ್ತೂಲನ್ನು ಆತ ತನ್ನ ಹುಟ್ಟೂರಿನಲ್ಲೇ ಖರೀದಿ ಮಾಡಿರುವುದು ಈ ಮೂಲಕ ಮೇಲ್ನೋಟಕ್ಕೆ ಸಾಬೀತಾಗಿದೆ. ಬೆಂಗಳೂರಿಗೆ ಆಗಮಿಸುವ ಮುನ್ನ ಮಹೇಶ್ ಏಳೆಂಟು ವರ್ಷಗಳ ಹಿಂದೆಯೇ ನಕ್ಸಲ್ ಸಂಪರ್ಕ ಪಡೆದು ಪಿಸ್ತೂಲ್ ಬಳಕೆ ಮಾಡುವುದನ್ನು, ಬಾಂಬ್ ಸ್ಫೋಟ, ಶಸ್ತ್ರಾಸ್ತ್ರಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪೂರೈಕೆ ಮಾಡುವುದರ ಬಗ್ಗೆಯೂ ಪರಿಣಿತಿ ಹೊಂದಿದ್ದ ಎಂದು ಹೇಳಲಾಗುತ್ತಿದೆ.
ಕಳೆದ ಏಪ್ರಿಲ್1ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಬಳಿ ಇರುವ ಕಾಡುಗೋಡಿ ಸಮೀಪದ ಪ್ರಗತಿ ಕಾಲೇಜ್ ನ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಗೌತಮಿಯನ್ನು ಮಹೇಶ್ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ವೇಳೆ ಅದನ್ನು ತಡೆಯಲು ಬಂದ ಸಹಪಾಠಿ ಸಿರಿಷಾ ಕೂಡ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಚಾರಣೆ ವೇಳೆ ನಾಟಕ ಮಾಡುವ ಮಹೇಶ
ವಿಚಾರಣೆ ವೇಳೆ ಮಾನಸಿಕ ಅಸ್ವಸ್ಥನಂತೆ ವರ್ತಿಸುವ ಮಹೇಶ ಕೆಲವು ಮಾಹಿತಿಗಳನ್ನು ನೀಡಲು ನಿರಾಕರಿಸುತ್ತಿದ್ದಾನೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಈತ ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯಲ್ಲಿದ್ದು, ಮಾಹಿತಿ ನೀಡುವಾಗ ಮಾತ್ರ ನಾಟಕವಾಡುತ್ತಿದ್ದಾನೆ. ಮಹೇಶನಿಗೆ ಬಂದೂಕನ್ನು ನಕ್ಸಲೀಯರು ಪೂರೈಕೆ ಮಾಡಿದರೆ ಅಥವಾ ಗೌತಮಿ ಮೇಲಿದ್ದ ಹಳೆಯ ದ್ವೇಷಕ್ಕಾಗಿ ಖರೀದಿ ಮಾಡಿ ಗುಂಡು ಹಾರಿಸಿದನೇ ಎಂಬುದು ಮಾತ್ರ ಈವರೆಗೂ ನಿಗೂಢವಾಗಿಯೇ ಉಳಿದಿದೆ. ಪೊಲೀಸ್ ತನಿಖಾಧಿಕಾರಿಗಳು ಹೇಳುವ ಪ್ರಕಾರ, 9ಎಂಎಂ ಪಿಸ್ತೂಲು ಹಾರಿಸಬೇಕಾದರೆ ಇದರ ಬಗ್ಗೆ ಸಂಪೂರ್ಣವಾಗಿ ತರಬೇತಿ ಪಡೆಯಬೇಕು.