ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರ ಕೂಲಿ ಹೆಚ್ಚಳವಾಗಿದೆ. ಈ ಸಂಬಂಧ ಖಾತ್ರಿ ಕಾಯ್ದೆ ಎಂಜಿಎನ್ ಆರ್ ಇಜಿಎ 2005 (42-2005)ಗೆ ತಿದ್ದುಪಡಿ ಮಾಡಲಾಗಿದ್ದು ಪರಿಷ್ಕತ ಕೂಲಿ ದರಗಳು ಏ.1ರಿಂದಲೇ ಜಾರಿಗೆ ಬರಲಿದೆ.
ಹೀಗಾಗಿ ಕರ್ನಾಟಕದಲ್ಲಿ ಕೂಲಿ ದರ ರು. 200ರ ಗಡಿ ದಾಟಿದೆ. ಇದು ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ಕನಿಷ್ಠ ನೂರು ದಿನದ ಉದ್ಯೋಗ ಕೊಡುವ ಸಂಬಂಧ ಜಾರಿಗೆ ತರಲಾದ ನರೇಗಾ ಒಂದರ್ಥದಲ್ಲಿ ಉದ್ಯೋಗದ ಹಕ್ಕು ಪ್ರತಿಪಾದಿಸಿದೆ ಯಾದರೂ ವಾಸ್ತವದಲ್ಲಿ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಕೂಲಿ ಪ್ರಮಾಣ ದುಬಾರಿಯಾಗಿದ್ದರಿಂದ ಲಾಭಾಂಶವೂ ಕಡಿಮೆಯಾಗಿತ್ತು. ಇದೀಗ ಖಾತ್ರಿ ಕೂಲಿ ಮತ್ತೆ ಜಾಸ್ತಿಯಾಗಿರುವುದರಿಂದ ಕೃಷಿ ಕ್ಷೇತ್ರ ಎದುರಿಸುವ ಸಮಸ್ಯೆಗಳು ತಕ್ಷಣಕ್ಕೆ ಪರಿಗಣನೆಗೆಬಾರದು. ನರೇಗಾ ಕಾಯ್ದೆ ತಿದ್ದುಪಡಿ ಅನ್ವಯ ಜಾರಿಗೆ ಬಂದ ಹೊಸ ಕೂಲಿ ದರ ಅತಿ ಹೆಚ್ಚು ಅಂದರೆ ಸುಮಾರು ರು.251 ಹರ್ಯಾಣ ರಾಜ್ಯದಲ್ಲಿ ನಿಗದಿಪಡಿ ಸಲಾಗಿದೆ. ಕರ್ನಾಟಕದಲ್ಲಿ ರು.192 ಇದ್ದ ಕೂಲಿ ರು.204ಕ್ಕೆ ಹೆಚ್ಚಳ ಮಾಡಲಾಗಿದೆ.