ಜಿಲ್ಲಾ ಸುದ್ದಿ

ಪರಪ್ಪನ ಅಗ್ರಹಾರ ಜೈಲಿಂದ ಕೊಲೆ ಅಪರಾಧಿ ಪರಾರಿ

Mainashree

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ, ಚಾಣಾಕ್ಷತನದಿಂದ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೈದಿಗಳನ್ನು ನೋಡಲು ಬರುವ ಸಂದರ್ಶಕರಿಗೆ ಪರಪ್ಪನ ಅಗ್ರಹಾರ ಪೊಲೀಸರು ವಿತರಿಸುವ ಗೇಟ್‌ಪಾಸ್‌ಗೆ ಹಾಕುವ ಸೀಲನ್ನು ಬಳಸಿಕೊಂಡು, ಈ ಜೈಲಲ್ಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೊಲೆ ಅಪರಾಧಿ ಮಂಜುನಾಥ(33) ಚಾಣಾಕ್ಷತನದಿಂದ ಪಾರಾಗಿದ್ದಾನೆ.

ಸಂದರ್ಶಕನಂತೆ ನಟಿಸಿ, ಜೈಲು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಜೈಲಿನಿಂದ ಪರಾರಿಯಾಗಿದ್ದಾನೆ. ಶುಕ್ರವಾರ ಸಂಜೆ 5 ಗಂಟೆಗೆ ಕೈದಿಗಳ ರೋಲ್‌ ಕಾಲ್‌ ಕರೆಯಲಾದಾಗ ಕೈದಿ ಮಂಜುನಾಥ ತಪ್ಪಿಸಿಕೊಂಡಿರುವುದು ಬೆಳಕಿಗೆ ಬಂತು.

ಕೂಡಲೇ ಜೈಲು ಅಧಿಕಾರಿಗಳು ಸಿಬ್ಬಂದಿಗಳನ್ನು ಜಾಗೃತಗೊಳಿಸಿ ಕಟ್ಟೆಚ್ಚರ ನೀಡಿದರು. ಜೈಲಿನೊಳಗಿನ ಸಿಸಿಟಿವಿಯಲ್ಲಿ ಮುದ್ರಿತವಾದ ಚಿತ್ರಿಕೆಗಳ ದಾಖಲೆಯನ್ನು ಪರಿಶೀಲಿಸಿದಾಗ ಕೈದಿ ಮಂಜುನಾಥನು ಇತರ ಸಂದರ್ಶಕರಂತೆ ಜೈಲಿನಿಂದ ನಿರ್ಗಮಿಸುತ್ತಿರುವುದು ಕಂಡು ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ತೀವ್ರ ತುರ್ತು ತನಿಖೆಯನ್ನು ಕೈಗೊಂಡಿರುವ ಅಧಿಕಾರಿಗಳು ಕೈದಿ ಮಂಜುನಾಥನನ್ನು ಶೋಧಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲಿನಿಂದ ಪರಾರಿಯಾಗಲು ಆತನಿಗೆ ಪೊಲೀಸರು ನೀಡುವ ಗೇಟ್‌ ಪಾಸಿನ ಸೀಲ್‌ ಹೇಗೆ ದೊರಕಿತು ಮತ್ತು ಸಾಮಾನ್ಯ ಉಡುಪುಗಳು ಆತನಿಗೆ ಎಲ್ಲಿಂದ ಸಿಕ್ಕಿದವು, ಇವುಗಳನ್ನು ಆತನೇ ಖುದ್ದು ಪಡೆದುಕೊಂಡನೇ ಅಥವಾ ಜೈಲು ಸಿಬಂದಿಗಳಲ್ಲಿ ಯಾರಾದರೂ ಆತನಿಗೆ ಅವುಗಳನ್ನು ಒದಗಿಸಿದರೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

SCROLL FOR NEXT